Saturday, July 4, 2009

ಅಭಿಜಾತ ಕಲಾವಿದ ಹಡಿನಬಾಳು


ವಿಭಿನ್ನತೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವ ಆಯಸ್ಕಾಂತೀಯ ಗುಣವುಳ್ಳ ಕಲೆ ಯಕ್ಷಗಾನ. ಇಲ್ಲಿ ಪ್ರಬುದ್ಧ ಎಂದು ಕರೆಯಬಹುದಾದ ಕಲಾವಿದರ ಸಂಖ್ಯೆ ಬಹಳಷ್ಟಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವವರಂತೂ ಅಪರೂಪ. ಪುಂಡು ವೇಷ ಮಾಡುವವನಿಗೆ ಕಿರೀಟ ವೇಷ ಒಪ್ಪುವುದಿಲ್ಲ. ಖಳ ಪಾತ್ರ ಮಾಡಿದರೆ ಪಾತ್ರ ಬೀಳಾಗುತ್ತದೆ. ಹಾಸ್ಯ ಪಾತ್ರದ ನಿರ್ವಹಣೆ ಕಷ್ಟ. ಇನ್ನು ಎಲ್ಲ ಪಾತ್ರಕ್ಕೂ ಸೈ ಎಂದರೆ ಮುಖವರ್ಣಿಕೆ ಸರಿ ಇರುವುದಿಲ್ಲ. ಅದು ಓಕೆಯಾದರೆ ಪಾತ್ರಕ್ಕೆ ಬೇಕಾದ ಮಾತುಗಾರಿಕೆ ಬರುವುದಿಲ್ಲ. ಹೀಗಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದರು ಹೆಚ್ಚು ಇಷ್ಟವಾಗುತ್ತಾರೆ. ಅಂಥವರ ಸಾಲಿಗೆ ಸೇರಿದವರು ಹಡಿನಬಾಳು ಶ್ರೀಪಾದ ಹೆಗಡೆ.
ಉತ್ತರಕನ್ನಡ ಹೊನ್ನಾವರ ತಾಲೂಕಿನ ಮಾಳಕೋಡಿನ ಗಣೇಶ ಹೆಗಡೆ ಮತ್ತು ಮಹಾಲಕ್ಷ್ಮೀ ಅವರ ಮಗ ಶ್ರೀಪಾದ ಹೆಗಡೆ ಅವರಿಗೆ ಚಿಕ್ಕಂದಿನಿಂದಲೇ ಕಲೆಗಳಲ್ಲಿ ಆಸಕ್ತಿ. ಯಕ್ಷಗಾನ ಅಷ್ಟೇ ಅಲ್ಲ, ಮಣ್ಣಿನ ಮೂರ್ತಿ ಮಾಡುವುದರಲ್ಲೂ ಆಸಕ್ತಿ. ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಅವರ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಸಿಮೀತವಾಯಿತು. ಕೆಲಸಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಜೀವನ ಸಾಗಿಸಲು ಕೆಲಸ ಅನಿವಾರ್ಯವಾಗಿತ್ತು. ಆಗ ಇವರನ್ನು ಕೈಬೀಸಿ ಕರೆದಿದ್ದು ಚಿಕ್ಕಂದಿನ ಆಸಕ್ತಿಯ ಯಕ್ಷಗಾನ. ತಮ್ಮ ಮಾವ ಹಾಗೂ ಯಕ್ಷಗಾನ ಕಲಾವಿದ ಸತ್ಯ ಹೆಗಡೆ ಅವರಿಂದ ಸ್ಪೂರ್ತಿಗೊಂಡ ಇವರು ಗುಂಡಬಾಳ ಮೇಳಕ್ಕೆ ಸೇರಿದರು.
ಶ್ರೀಪಾದ ಹೆಗಡೆ ಯಕ್ಷರಂಗಕ್ಕೆ ಬಂದಿದ್ದು ಹಾಸ್ಯ ಕಲಾವಿದನಾಗಿ. ನಂತರ ಯಕ್ಷಗಾನದ ಶ್ರೇಷ್ಠ ಕಲಾವಿದ ಮಹಾಬಲ ಹೆಗಡೆ ಅವರ ಒಡನಾಟ ಪ್ರಾರಂಭವಾಯಿತು. ಗಂಭೀರ ಪಾತ್ರದೆಡೆಗೆ ವಾಲಿದರು. ಪಾತ್ರಗಳಿಗೆ ತಮ್ಮದೇ ಶೈಲಿಯಲ್ಲಿ ಜೀವ ತುಂಬತೊಡಗಿದರು.
ಶ್ರೀಪಾದ ಹೆಗಡೆ ಅವರು ಕೀಚಕ ವಧೆಯ `ವಲಲ', ಗದಾಯುದ್ಧದ 'ಭೀಮ' ರುದ್ರಕೋಪದ `ರಕ್ತಜಂಘ', ಲಂಕಾದಹನದ `ಹನುಮಂತ', ಕನಕಾಂಗಿ ಕಲ್ಯಾಣದ `ಘಟೋದ್ಗಜ' ಇವಲ್ಲದೇ ಕಾಳಿದಾಸ, ರಾಮ, ಕೌರವ, ರಾವಣ ಮುಂತಾದ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. `ಗೋವಿಂದನ ರಾಜಿ ಪಂಚಾಯ್ತಿ' ಎನ್ನುವ ಪ್ರಸಂಗವನ್ನು ಹವ್ಯಕ ಭಾಷೆಯಲ್ಲಿ ಮಾಡಿದ ಹೆಗ್ಗಳಿಕೆ ಇವರದ್ದು.
ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ಗುಂಡಬಾಳ, ಇಡಗುಂಜಿ, ಪಂಚಲಿಂಗ, ಪೆರ್ಡೂರು, ಬಚ್ಚಗಾರು, ಕುಮಟಾ, ಮಂದರ್ತಿ, ಶಿರಸಿ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಹಲವಾರು ವೀಡಿಯೋ ಯಕ್ಷಗಾನದಲ್ಲಿ ಇವರು ಭಾಗವಹಿಸಿದ್ದಾರೆ. ತಮ್ಮದೇ ಆದ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ.
ಯಕ್ಷಗಾನ ಮೇಳದ ತಿರುಗಾಟ ಆರು ತಿಂಗಳು ಮಾತ್ರ. ಉಳಿದ ದಿನಗಳಲ್ಲಿ ಹಲವಾರು ಕಡೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಅದರಿಂದ ಜೀವನ ನಿರ್ವಹಣೆ ಕಷ್ಟ. ಅದಕ್ಕಾಗಿ ಅವರು ಚೌತಿಯ ಸಮಯದಲ್ಲಿ ಗಣಪತಿ ಮೂರ್ತಿ ನಿರ್ಮಾಣ, ಮಳೆಗಾಲದಲ್ಲಿ ಕೊಡೆ ರಿಪೇರಿ, ಹೊಲಿಗೆ, ಎಲೆ ವ್ಯಾಪಾರ ಇತ್ಯಾದಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನೂ ಜನತಾಮನೆಯಲ್ಲಿಯೇ ವಾಸಿಸುತ್ತಿರುವ ಇಂಥ ಅನುಭವಿ ಕಲಾವಿದನ ಈ ಸ್ಥಿತಿ ನಾಗರಿಕ ಸಮಾಜಕ್ಕೆ ಗೌರವ ತರುವಂಥದ್ದಲ್ಲ.

Followers

FEEDJIT Live Traffic Feed