Tuesday, August 4, 2009

ಪುರೋಹಿತನಾಗಬೇಕಿತ್ತು,ಕಲಾವಿದನಾದೆ


ಹೆಸರು: ಭಾಸ್ಕರ ಜೋಶಿ
ಯಕ್ಷಗಾನದ ಪ್ರಸಿದ್ಧ ಸ್ತ್ರೀ ಪಾತ್ರದಾರಿ
ತಂದೆ: ನಾರಾಯಣ ಜೋಶಿ, ತಾಯಿ: ಗಂಗಾ ಜೋಶಿ
ಪತ್ನಿ: ಮಾಲಿನಿ ಜೋಶಿ
ಮಕ್ಕಳು: ಸ್ಪೂರ್ತಿ, ರಘುರಾಂ
ಜನ್ಮ ದಿನಾಂಕ: 30-04-1956



ನನ್ನದು ಬಡ ಕುಟುಂಬ. ಪೌರೋಹಿತ್ಯದಿಂದ ಜೀವನ ಸಾಗಿಸುತ್ತಿದ್ದ ಅಪ್ಪ, ಅಮ್ಮ. ಉತ್ತರಕನ್ನಡದ ಸಿದ್ದಾಪುರ ತಾಲೂಕಿನ ಶಿರಳಗಿ ನನ್ನ ಊರು. ಕನಸು ಕಾಣುವಷ್ಟು ಅವಕಾಶಗಳು ನನಗಿರಲಿಲ್ಲ. ಆದರೆ ಬಣ್ಣದ ಹುಚ್ಚು ಚಿಕ್ಕಂದಿನಿಂದಲೂ ಇತ್ತು. ಅದನ್ನು ಕರಗತ ಮಾಡಿಕೊಳ್ಳಲು ತೊಡಗದಿದ್ದರೆ ಅಪ್ಪನ ಹಾದಿಯಲ್ಲೇ ನಾನು ನಡೆಯಬೇಕಿತ್ತು.
ಹೈಸ್ಕೂಲ್‌ ಮುಗಿದ ನಂತರವೂ ಕಾಡುತ್ತಿದ್ದ ಬಡತನ ಕಾಲೇಜಿಗೆ ಹೋಗಲು ಬಿಡಲಿಲ್ಲ. ನನ್ನ ಮೊದಲ ರಂಗಪ್ರವೇಶ ನಾಟಕದ ಮೂಲಕ. ಹುಲಿಮನೆ ಸೀತಾರಾಂ ಶಾಸ್ತ್ರಿ ಅವರ ನಿರ್ದೇಶನದ `ಪನ್ನಾದಾಸಿ' ನಾಟಕ ಅದು. ಆಗ ಸ್ತ್ರೀ ಪಾತ್ರವನ್ನು ಪುರುಷರೇ ಮಾಡುತ್ತಿದ್ದರು. ನನ್ನ ಕಲಾಯಾತ್ರೆ ಸ್ತ್ರೀ ವೇಷದಿಂದಲೇ ಪ್ರಾರಂಭವಾಯಿತು.
ಅದೇ ವರ್ಷ ಸಿದ್ದಾಪುರ ಕಾಲೇಜಿನಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ತರಬೇತಿ ನೀಡುತ್ತಿದ್ದರು. ಅಲ್ಲಿ ನಾನು ಸೇರಿಕೊಂಡೆ. ಈ ಸಂದರ್ಭದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಮ್ಮೂರಿನವರೇ ಆದ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಜೊತೆ ಕೆರೆಮನೆ ಗಜಾನನ ಹೆಗಡೆ ನಾಟಕ ನೋಡಲು ಬಂದರು. ಅವರು ನನ್ನ ಪಾತ್ರ ಮೆಚ್ಚಿ ಕೆರೆಮನೆ ಮೇಳಕ್ಕೆ ಆಹ್ವಾನಿಸಿದರು.
ನನ್ನ ಕನಸು ಪ್ರಾರಂಭವಾದದ್ದು ಆ ಮೇಳ ಸೇರಿದ ಮೇಲೆ. ಎಲ್ಲರೂ ಮೆಚ್ಚುವ ಸ್ತ್ರೀ ಪಾತ್ರದಾರಿಯಾಗಬೇಕು, ವೃತ್ತಿ ಮೇಳದ ಹ್ಯಾಂಡ್‌ಬಿಲ್‌ನಲ್ಲಿ ಮುಖ್ಯ ಸ್ತ್ರೀ ವೇಷದಾರಿ ಹೆಸರು ನನ್ನದಾಗಿರಬೇಕು. ದಿನಕ್ಕೆ ನೂರು ರೂಪಾಯಿಗಿಂತ ಹೆಚ್ಚಿಗೆ ಸಂಬಳ ಪಡೆಯಬೇಕು ಎಂಬ ಕನಸನ್ನು ಕಂಡೆ.
ಕೆರೆಮನೆ ಮೇಳದಲ್ಲಿ ನನಗೆ ಉತ್ತಮ ಅವಕಾಶಗಳು ಸಿಕ್ಕವು. ಗಜಾನನ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ ಯಕ್ಷಗಾನದ ಸೂಕ್ಷ್ಮಗಳನ್ನು ತಿಳಿಸಿ ಕೊಟ್ಟರು. ಒಂದು ವರ್ಷ ಅಲ್ಲಿದ್ದೆ. ಮರುವರ್ಷ ಉಡುಪಿ ಯಕ್ಷಗಾನ ಕೇಂದ್ರದ ತಿರುಗಾಟ ತಂಡವಾದ `ಯಕ್ಷರಂಗ'ಕ್ಕೆ ಸೇರಿದೆ. ಅದು ಶಿವರಾಂ ಕಾರಂತರ ಗರಡಿ. ಅಲ್ಲಿ ಕೇವಲ ಯಕ್ಷಗಾನ ಸಂಗೀತದಲ್ಲಿ ಮಾತ್ರ ಪ್ರಸಂಗ ನಡೆಯುತ್ತಿತ್ತು. ಅಭಿನಯ ಪ್ರಧಾನ. ಸಂಭಾಷಣೆ ಇರಲಿಲ್ಲ. ಅದು ಸ್ತ್ರೀ ಪಾತ್ರದ ಸಂವೇದನೆ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು. ಯಕ್ಷರಂಗದಲ್ಲಿ ಮುಖ್ಯ ಸ್ತ್ರೀ ಪಾತ್ರ ನನಗೇ ಸಿಗುತ್ತಿತ್ತು. ದಮಯಂತಿ, ಚಿತ್ರಾಂಗದೆ, ಅಂಬೆ ಪಾತ್ರಗಳನ್ನು ಮಾಡಿದೆ. ಕಾರಂತರ ಜೊತೆ ಹಂಗೇರಿ, ಲಂಡನ್‌, ರಷ್ಯಾ, ಜಪಾನ್‌ ಮುಂತಾದ ದೇಶ ಸುತ್ತಾಡಿ ಬಂದೆ.
ಯಕ್ಷರಂಗದಲ್ಲಿ ನಾವು ಸಿಮೀತ ಪಾತ್ರಗಳಿಗೆ ಒಗ್ಗಬೇಕಾಯಿತು. ಆದರೂ 6 ವರ್ಷ ಅಲ್ಲಯೇ ಕೆಲಸ ಮಾಡಿದೆ. ನಂತರ ಸಾಲಿಗ್ರಾಮ ಮೇಳ. ಅಲ್ಲಿ ನನಗೆ ಹೆಸರು ಬಂತು. ಅಮೃತೇಶ್ವರಿ, ಪೆರ್ಡೂರು ಮೇಳದಲ್ಲಿ ಪಾತ್ರ ನಿರ್ವಹಿಸಿದೆ. ಆಗ ಚಿಟ್ಟಾಣಿ, ಶಿರಿಯಾರ ಮಂಜು ನಾಯ್ಕ, ಕಾಳಿಂಗ ನಾವುಡ, ಧಾರೇಶ್ವರ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ದೊರೆಯಿತು. ಹ್ಯಾಂಡ್‌ಬಿಲ್‌ನಲ್ಲಿ ಮೊದಲ ಪಂಕ್ತಿಯಲ್ಲಿ ಹೆಸರೂ ಬಂತು, ಸಂಬಳವೂ ಜಾಸ್ತಿಯಾಯಿತು. ಒಂದು ಹಂತದ ಕನಸು ನನಸಾಯಿತು.
ನಂತರ ಸುರುವಾದದ್ದು ಮೇಳ ಕಟ್ಟುವ ಕನಸು. ಅದಕ್ಕೂ ಒಂದುದಿನ ಯೋಗ ಕೂಡಿ ಬಂತು. ಭುವನಗಿರಿ ಮೇಳ ಪ್ರಾರಂಭ ಮಾಡಿದೆ. ಮಹಾಬಲ ಹೆಗಡೆ, ಕಣ್ಣಿಮನೆ ಮುಂತಾದ ಖ್ಯಾತ ಕಲಾವಿದರಿದ್ದರು. ಮೂರೇ ವರ್ಷದಲ್ಲಿ ಐದು ಲಕ್ಷರೂಪಾಯಿ ಸಾಲಗಾರನಾದೆ. ಮೇಳ ನಿಂತಿತು. ಸಾಲ ತೀರಿಸಲಿಕ್ಕೆ ಮತ್ತೆ ಪೆರ್ಡೂರು ಮೇಳ ಸೇರಿದೆ.
ನನ್ನ ದುರಾದೃಷ್ಟ ನೋಡಿ, ಯಕ್ಷಗಾನಕ್ಕೆ ಹೊರಟಿದ್ದ ನಾನು ಅಪಘಾತಕ್ಕೆ ಒಳಗಾದೆ. ಎರಡು ವರ್ಷ ಸಂಪೂರ್ಣ ಮನೆಯಲ್ಲೇ ಇರಬೇಕಾಯಿತು. ನಂತರ ಅಭಿಮಾನಿಗಳ ಒತ್ತಾಯದಿಂದ ಕುಂಟು ಕಾಲಲ್ಲೇ ವೇಷ ಮಾಡಲು ಪ್ರಾರಂಭಿಸಿದೆ. ನಾನು ಅಪಘಾತ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋದೆ. ಅವರು ನೀನು ಕಲಾವಿದ ಎನ್ನುವುದನ್ನು ಸಾಬೀತುಪಡಿಸು ಎಂದರು. ಸರಿಯಾದ ದಾಖಲೆ ನನ್ನಹತ್ತಿರ ಇರಲಿಲ್ಲ. ಅಂದೇ ನಾನೊಂದು ತಿರ್ಮಾನಕ್ಕೆ ಬಂದೆ. ಅದೆಷ್ಟೋ ಕಲಾವಿದರ ಪರಿಚಯ ಜಗತ್ತಿಗೆ ಇಲ್ಲ. ಅಂತಹ ಕಲಾವಿದರ ಬಗ್ಗೆ ಮಾಹಿತಿಯಿರುವ ಪುಸ್ತಕ ಬರೆಯಬೇಕೆಂದು.
ಈಗ ಆ ಕನಸನ್ನು ಸಾಕಾರ ಮಾಡುವ ಯತ್ನದಲ್ಲಿದ್ದೇನೆ.

ನಿರೂಪಣೆ: ನಾಗರಾಜ ಮತ್ತಿಗಾರ

Followers

FEEDJIT Live Traffic Feed