Tuesday, April 21, 2009

ಮದ್ದಲೆ ಮೋಡಿಗಾರ ಶಂಕರ ಭಾಗವತ




ಯಕ್ಷಗಾನವೆಂದರೆ ಹೊಳೆಯುವ ಉಡುಪು, ತರತರಹದ ವೇಷಭೂಷಣ, ನವರಸದಿಂದ ಕೂಡಿದ ಭಾವ, ಅಭಿನಯ, ನೃತ್ಯ, ಮಾತುಗಾರಿಕೆ ಎನ್ನುವುದು ಜನಜನಿತ. ರಂಗದಲ್ಲಿ ಇವೆಲ್ಲ ಕಾಣಬೇಕಾದರೆ ಹಿಮ್ಮೇಳದ ಶ್ರಮ ತುಂಬಾ. ಹಿಮ್ಮೇಳದ ಭಾಗವತಿಕೆ ಚೆನ್ನಾಗಿ ಕಾಣಲು ಉತ್ತಮ ಮದ್ದಲೆ ಚಂಡೆವಾದಕರು ಬೇಕು. ಅದರಲ್ಲಿಯೂ ಮದ್ದಲೆವಾದಕ ಸೂಕ್ಷಗ್ರಹಿಯಾಗಿರಬೇಕು. ಮದ್ದಲೆಯೊಂದಿಗೆ ಮಾತನಾಡುವ ಚಾಕಚಕ್ಯತೆ ಹೊಂದಿದ್ದು, ಸುಮಾರು ನಲವತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತ ಖ್ಯಾತಿ ಪಡೆದಿರುವ ಕಲಾವಿದ ಶಂಕರ ಭಾಗವತ.
ಉತ್ತರಕನ್ನಡದ ಯಲ್ಲಾಪುರ ತಾಲೂಕಿನ ಶಿಸ್ತಮುಡಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಶಂಕರ ಭಾಗವತರು ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿಯನ್ನು ಹೊಂದಿದವರು. ಆದರೆ ಹತ್ತನೇ ತರಗತಿಯವರೆಗೂ ಮಾತು ಬಾರದ ಕಾರಣ ನೃತ್ಯ ಕಲಿಯುವ ಬದಲು ಮದ್ದಲೆ ನುಡಿಸಲು ಹಿರಿಯರು ಸಲಹೆ ನೀಡಿದರು. ಶಾಲಾ ಅಭ್ಯಾಸಕ್ಕೆ ತಿಲಾಂಜಲಿ ನೀಡಿದರು. ಮದ್ದಲೆ ಕಲಿಯಲು ಖ್ಯಾತ ಮದ್ದಲೆ ವಾದಕ ಬೆಳ್ಳಂಜೆ ತಿಮ್ಮಪ್ಪ ನಾಯ್ಕರ ಶಿಷ್ಯರಾದರು. ಇವರ ಗರಡಿಯಲ್ಲಿ ಮದ್ದಲೆವಾದನವನ್ನು ಶಾಸ್ತ್ರೀಯವಾಗಿ ಕಲಿತರು.
ಶಂಕರ ಭಾಗವತರು ಮದ್ಲೆ ವಾದನವನ್ನು ವೃತ್ತಿಯಾಗಿ ಸ್ವೀಕರಿಸಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ನಂತರ ಇಡಗುಂಜಿ ಮೇಳ, ಪಂಚಲಿಂಗ, ಪೂರ್ಣಚಂದ್ರಕಲಾ ಪ್ರತಿಷ್ಠಾನ ಕೊಂಡದಕುಳಿ, ಸಾಲಿಗ್ರಾಮ, ಪೆರ್ಡೂರು, ಬಂಗಾರಮುಕ್ಕಿ ಮೇಳಗಳಲ್ಲಿ ಕಲಾಸೇವೆಯನ್ನು ಸಲ್ಲಿಸಿ, ದಿವಾನ್‌ ಯಕ್ಷಸಮೂಹ ಹಾರ್ಸಿಕಟ್ಟಾ ಸಾಂಸ್ಕೃತಿಕ ವೇದಿಕೆಯಲ್ಲಿ ಹವ್ಯಾಸಿ ಕಲಾವಿದರಾಗಿದ್ದುಕೊಂಡೆ ಸೇವೆಸಲ್ಲಿಸುತ್ತಿದ್ದಾರೆ.
ಯಕ್ಷಗಾನದ ನಾಂದಿ ಪದ್ಯಕ್ಕೆ ಮದ್ದಲೆ ವಾದಕರಾಗಿ ಮೇಳಕ್ಕೆ ಸೇರಿದವರು ಶಂಕರ ಭಾಗವತರು. ಇವರ ಕೈಚಳಕ ಮತ್ತು ಮದ್ದಲೆ ಮೇಲಿನ ಮೃದು ಹೊಡೆತವನ್ನು ಗಮನಿಸಿದ ಕಂಚಿನ ಕಂಠ ಖ್ಯಾತಿಯ ನಾರಣಪ್ಪ ಉಪ್ಪೂರರು “ನನಗೆ ಸಾಥ್‌ ಕೊಡು” ಎಂದರು. ಮುಜುಗರ ಸ್ವಭಾವದ ಇವರಿಗೆ ಧೈರ್ಯದಿಂದ ವೇದಿಕೆ ಹತ್ತಿದರು. ಹಿರಿಯ ಹಾಡುಗಾರರಿಗೆ ಸಾಥ್‌ ನೀಡಿದರು. ಆಗ ಇವರಿಗೆ ಹದಿನಾರು ವರ್ಷ. ಅಂದು ಉಪ್ಪೂರರು ಶಂಹರ ಭಾಗವತರಿಗೆ ಧೈರ್ಯ ತುಂಬದಿದ್ದರೆ ಇಂದು ಬಡುಗು ತಿಟ್ಟಿನಲ್ಲಿ ಉತ್ತಮ ಮದ್ದಲೆ ವಾದಕ ಕಾಣಲು ಸಿಗುತ್ತಿದ್ದರೋ ಇಲ್ಲವೋ?. ಉತ್ತಮ ಮದ್ದಲೆ ಆವಾದಕರನ್ನು ಪರಿಚಯಿಸಿದ ಕೀರ್ತಿ ಉಪ್ಪೂರರಿಗೆ ಸಲ್ಲುತ್ತದೆ.
ಶಂಕರ ಭಾಗವತರು ಹಿರಿಯ-ಕಿರಿಯ ಭಾಗವತರಿಗೆ ಮದ್ದಲೆ ಸಾಥ್‌ ನೀಡಿ ಸೈ ಎನಿಸಿಕೊಂಡಿದಾರೆ. ಕಲಾರಸಿಕರ ಮನದಲ್ಲಿ ನೆಲೆ ನಿಂತಿದ್ದಾರೆ. ಹಿರಿಯ ಹೆಸರನ್ನು ಕಿರಿಯ ವಯಸ್ಸಿನಲ್ಲಿಯೇ ಪಡೆದು ದಿವಂಗತರಾದ ಕಾಲಿಂಗ ನಾವುಡ ಮತ್ತು ಶಂಕರ ಭಾಗವತರ ಜೋಡಿ ಯಕ್ಕಗಾನ ಅಭಿಮಾನಿಗಳಲ್ಲಿ ಇನ್ನು ಮಾಸದೆ ಹಾಗೇ ಉಳಿದಿದೆ ಎಂದರೆ ಅತಿಶಯೋಕ್ತಿಯಲ್ಲ.
ತೆಂಕು ತಿಟ್ಟಿನ ಮದ್ದಲೆ ವಾದನದಲ್ಲೂ ನಿಪುಣರಾಗಿರುವ ಇವರು “ವೇಣು-ಗಾನ-ಲಯ-ವಿನೋದ ”ಎನ್ನುವ ವಿನೂತನ ಪ್ರಯೋಗದಲ್ಲಿ ಭಾಗವತ ಕೊಳಗಿ ಅವರ ಜೊತೆಗೂಡಿ, ತಬಲಾ ವಾದಕ ಲಕ್ಷ್ಮೀಶ್‌ ರಾವ್‌ ಕಲ್ಗುಂಡಿಕೊಪ್ಪ ಅವರ ಜೊತೆಯಲ್ಲಿ ತಬಲಾ- ಮದ್ದಲೆ ಜುಗಲ್‌ಬಂಧಿ ಕಾರ್ಯಕ್ರಮ ನೀಡಿದ್ದಾರೆ. ಖ್ಯಾತ ಭಾಗವತ ಸುಬ್ರಮಣ್ಯ ಧಾರೇಶ್ವರ ಮತ್ತು ಮದ್ದಲೆ ವಾದಕ ದುರ್ಗಪ್ಪ ಗುಡಿಗಾರರ ಜೊತೆಗೂಡಿ ನೀಡಿದ ”ಹಿಮ್ಮೇಳ ವೈಭವ” ಎನ್ನುವ ಕಾರ್ಯಕ್ರಮ ಜನಪ್ರಿಯವಾಗಿತ್ತು.
ಶಂಕರ್‌ ಭಾಗವತರು ಮದ್ದಲೆ ಸಾಥ್‌ ನೀಡಿದ ಐವತ್ತಕೂ ಹೆಚ್ಚಿಗೆ ಯಕ್ಷಗಾನದ ಸಿಡಿಗಳು ಬಿಡುಗಡೆಯಾಗಿವೆ. ಕಾರವಾರ, ಧಾರವಾಡ ಆಕಾಶವಾಣಿ ಹಾಗೂ ದೂರದರ್ಶನ ಕೇಂದ್ರದಲ್ಲಿ ಭಾಗವಹಿಸಿ ಹಲವಾರು ಕಾರ್ಯಕ್ರಮವನ್ನು ನೀಡಿದ್ದಾರೆ. ತಬಲಾ ನುಡಿಸುವುದನ್ನು ಅಭ್ಯಾಸ ಮಾಡಿರುವ ಇವರು ಹಿಂದೂಸ್ತಾನಿ ಸಂಗೀತಗಾರ ವಸಂತ ಮುಂಬಯಿ ಇವರಿಗೆ ತಬಲಾ ಸಾಥ್‌ ನೀಡಿದ್ದಾರೆ. ಸ್ವೌಮ್ಯ ಸ್ವಭಾವ , ನಿಗರ್ವ ಸ್ವಭಾವ ಇವರ ಯಶಸ್ವಿಗೆ ಕಾರಣ. ಹಿರಿಯ ಕಲಾವಿದರ ಪ್ರೋತ್ಸಾಹ ಇವರಿಗೆ ಸ್ಪೂರ್ತಿ. ಇವರು ಮಾಡಿದ ಸಾಧನೆ ಪ್ರಶಂಸನೀಯ.
ಇಲ್ಲಿ ಮತ್ತೊಂದನ್ನು ಹೇಳಲೇಬೇಕುಬಡಗು ತಿಟ್ಟಿನಲ್ಲಿ ನಾಲ್ಕು ಜನ ಮದ್ದಲೆ ವಾದಕರನ್ನು ಯಾವಾಗಲೂ ಯಕ್ಷಗಾನ ಮರೆಯಬಾರದು. ಬೆಳ್ಳಂಜೆ ತಿಮ್ಮಪ್ಪ ನಾಯ್ಕ, ಹಿರಿಯಡ್ಕ ಗೋಪಾಲರಾಯರು, ದುರ್ಗಪ್ಪ ಗುಡಿಗಾರರು ಮತ್ತು ಶಂಕರ ಭಾಗವತ. ಇವರಲ್ಲಿ ಎರಡು ಜನ ತಮ್ಮ ಸೇವೆಯನ್ನು ಸಲ್ಲಿಸಿ ಅಸ್ತಗಂತರಾಗಿದ್ದಾರೆ. ಒಬ್ಬರು ನಿವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ. ಸದ್ಯ ಇನ್ನೂ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವವರು ಶಂಕರ ಭಾಗವತ ಮಾತ್ರ. ಈ ಮೂವರಿಗಿಂತ ಶಂಕರ ಭಾಗವತರ ಮದ್ದಲೆ ವಾದನವೆಂದರೆ ಅಲ್ಲೊಂದು ಜಲಕ್‌ ಇರುತ್ತದೆ. ತಬಲಾ ವಾದನದಲ್ಲಿ ಝಾಕೀರ್‌ ಹುಸೆನ್‌ ಇದ್ದರೆ ಹೇಗೋ ಹಾಗೆ ಯಕ್ಷಗಾನದ ಮದ್ದಲೆಯಲ್ಲಿ ಶಂಕರ ಭಾಗವತರು ಎಂದರೆ ಅತಿಶಯೋಕ್ತಿಯಲ್ಲ.

Wednesday, April 1, 2009

ಮೊದಲ ಅನುಭವ


ಈ ಬ್ಲಾಗ್‌ನಲ್ಲಿ ಈ ವಿಚಾರವನ್ನು ಬರೆಯಬಾರದು ಎನ್ನುತ್ತಲೇ ಬರೆಯುತ್ತಿದ್ದೇನೆ. ಕಾರಣ ಇಷ್ಟೇ ಇದು ನನ್ನ ಕುರಿತಾದ ವಿಚಾರ. ಆದರೆ ನಾನು ಯಕ್ಷಗಾನಕ್ಕೆ “ ಒಡ್ಡೋಲಗ” ಮಾಡಿದ ಅಂದರೆ ರಂಗಪ್ರವೇಶ ಮಾಡಿದ ವಿಷಯ. ಗಮ್ಮಾತ್ತಾಗಿದೆ. ನಾನು ಪಾತ್ರ ಮಾಡಿದ ಕೆಲವು ಪಾತ್ರ, ಜಾಗ, ಸಂದರ್ಭದ ಬಗ್ಗೆ ವಿಚಾರವನ್ನು ಹೇಳುತ್ತೇನೆ.
ನನ್ನ ಮೊದಲ ಪಾತ್ರ “ಕನಕಾಂಗಿ ಕಲ್ಯಾಣ”ದ ಲಕ್ಷಣನ ಪಾತ್ರ. ಇದೊಂದು ಪೊಂಕು ಪಾತ್ರ. ಇದರಲ್ಲಿ ಮಾತಿಲ್ಲ. ಪದ್ಯವಿಲ್ಲ. ಕುಣಿತವಿಲ್ಲ. ಒಂದಷ್ಟು ಪ್ರಯಾಣ ಕುಣಿತ ಮಾತ್ರವಿದೆ. ಘಟೋದ್ಗಜ ತನ್ನ ಮಾಯಾ ಶಕ್ತಿಯಿಂದ ಮಾಯಾ ಕೌರವರನ್ನು ಮಾಡುತ್ತಾನೆ. ಒಬ್ಬರನ್ನೇ ಕರೆಯುವುದು ರೂಢಿ. ಮೊದಲು ಬೂದಿಯನ್ನು ಚೌಕಿಯ ಕಡೆಗೆ ಹಾರಿಸಿದಾಗ ಕೌರವ ಬರುತ್ತಾನೆ. ನಂತರ ಲಕ್ಷಣ, ಕರ್ಣ, ಒಂದಷ್ಟು ಪಡೆ. ಸಿದ್ದವಾಗುತ್ತದೆ. ಗೋಡೆ ನಾರರಾಯಣ ಹೆಗಡೆ ಅವರ ಘಟೋದ್ಗಜ ನಾನು ಬಂದು ನಿಂತದ್ದೇ ತಡ “ಓ ಹೋ... . ತಟ್ಟಿರಾಯ” ಅಂದರು. ಗಂಭೀರವಾಗಿ ಇರಬೇಕಾದ ನಾನು ಪಕ್ಕನೆ ನಗೆಯಾಡಿದೆ. ನನ್ನನ್ನು ನೋಡಿದ ಜನರು ನಗೆಯಾಡಿದರು. ಇದು ಮೊದಲ ಅನುಭವ.
ನಂತರ ಹಳ್ಳಿಯ ಬಯಲಾಟ. ಗದಾಯುದ್ಧ ಪ್ರಸಂಗ. ನನ್ನದು ಅಶ್ವತ್ಥಾಮ. ನನ್ನಪ್ಪ ಆಟದ ದಿನ ಬೆಳಿಗ್ಗೆ ಟೀಕೆ ಮಾಡಿದ್ದ, “ಅಶ್ವತ್ಥಾಮ ಹೋಗಿ ಅಸ್ವಸ್ತತ್ಥಾಮ” ಆಗಬಹುದು ಎಂದು.
“ಗುರು ಸುತ ಅಶ್ವತ್ಥಾಮನೈತಂದನಾಗ’ ಪ್ರವೇಶ ಪದ್ಯ. ಬೆಂಕಿಯ ಚೆಂಡಿನಂತೆ ಪ್ರವೇಶಮಾಡಬೇಕು. ನಾನು ಪ್ರವೇಶ ಮಾಡಿದೆ. ಎದುರಿಗೆ ಅಪ್ಪ ಕುಳಿತಿದ್ದ. ಬೆಂಕಿಯ ಚಂಡಿಗೆ ನೀರು ಬಿದ್ದ ಸ್ಥಿತಿ ನನ್ನಾದಾಗಿತ್ತು.
ಇನ್ನೊಂದು ಬ್ರಹ್ಮಕಪಾಲದ ಕಿರಾತನ ಪಾತ್ರ. ಗಿರಿಗಡ್ಡೆ ಭಾಗವತರು ಪದ್ಯ ಹೇಳುತ್ತಿದ್ದರು. ಪದ್ಯ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಮದ್ದಲೆಯಲ್ಲಿ ಶಂಕರ ಭಾಗವತರು ಇದ್ದರು. ಅವರು ಸ್ವಲ್ಪ ಜೋರಾಗಿಯೇ ಇದು ಮುಕ್ತಾಯದ ಬಿಡ್ತಿಗೆ ಅಂದರು. ಇಲ್ಲದಿದ್ದರೆ ಪದ್ಯ ಮುಗಿದ ಮೇಲೂ ಹೆಜ್ಜೆ ಹಾಕುವ ಸ್ಥಿತಿ ಇರುತ್ತಿತ್ತು.
ಹೊಸತಾಗಿ ಪಾತ್ರ ಮಾಡಿದಾಗ ಆದ ನನ್ನ ಅನುಭವವಿದು. ಮುಂದಿ ಕಂತಿನಲ್ಲಿ ಹಳ್ಳಿ ಆಟದ ಗಮ್ಮತ್ತನ್ನು ಹೇಳುತ್ತೇನೆ.

Followers

FEEDJIT Live Traffic Feed