Wednesday, April 1, 2009

ಮೊದಲ ಅನುಭವ


ಈ ಬ್ಲಾಗ್‌ನಲ್ಲಿ ಈ ವಿಚಾರವನ್ನು ಬರೆಯಬಾರದು ಎನ್ನುತ್ತಲೇ ಬರೆಯುತ್ತಿದ್ದೇನೆ. ಕಾರಣ ಇಷ್ಟೇ ಇದು ನನ್ನ ಕುರಿತಾದ ವಿಚಾರ. ಆದರೆ ನಾನು ಯಕ್ಷಗಾನಕ್ಕೆ “ ಒಡ್ಡೋಲಗ” ಮಾಡಿದ ಅಂದರೆ ರಂಗಪ್ರವೇಶ ಮಾಡಿದ ವಿಷಯ. ಗಮ್ಮಾತ್ತಾಗಿದೆ. ನಾನು ಪಾತ್ರ ಮಾಡಿದ ಕೆಲವು ಪಾತ್ರ, ಜಾಗ, ಸಂದರ್ಭದ ಬಗ್ಗೆ ವಿಚಾರವನ್ನು ಹೇಳುತ್ತೇನೆ.
ನನ್ನ ಮೊದಲ ಪಾತ್ರ “ಕನಕಾಂಗಿ ಕಲ್ಯಾಣ”ದ ಲಕ್ಷಣನ ಪಾತ್ರ. ಇದೊಂದು ಪೊಂಕು ಪಾತ್ರ. ಇದರಲ್ಲಿ ಮಾತಿಲ್ಲ. ಪದ್ಯವಿಲ್ಲ. ಕುಣಿತವಿಲ್ಲ. ಒಂದಷ್ಟು ಪ್ರಯಾಣ ಕುಣಿತ ಮಾತ್ರವಿದೆ. ಘಟೋದ್ಗಜ ತನ್ನ ಮಾಯಾ ಶಕ್ತಿಯಿಂದ ಮಾಯಾ ಕೌರವರನ್ನು ಮಾಡುತ್ತಾನೆ. ಒಬ್ಬರನ್ನೇ ಕರೆಯುವುದು ರೂಢಿ. ಮೊದಲು ಬೂದಿಯನ್ನು ಚೌಕಿಯ ಕಡೆಗೆ ಹಾರಿಸಿದಾಗ ಕೌರವ ಬರುತ್ತಾನೆ. ನಂತರ ಲಕ್ಷಣ, ಕರ್ಣ, ಒಂದಷ್ಟು ಪಡೆ. ಸಿದ್ದವಾಗುತ್ತದೆ. ಗೋಡೆ ನಾರರಾಯಣ ಹೆಗಡೆ ಅವರ ಘಟೋದ್ಗಜ ನಾನು ಬಂದು ನಿಂತದ್ದೇ ತಡ “ಓ ಹೋ... . ತಟ್ಟಿರಾಯ” ಅಂದರು. ಗಂಭೀರವಾಗಿ ಇರಬೇಕಾದ ನಾನು ಪಕ್ಕನೆ ನಗೆಯಾಡಿದೆ. ನನ್ನನ್ನು ನೋಡಿದ ಜನರು ನಗೆಯಾಡಿದರು. ಇದು ಮೊದಲ ಅನುಭವ.
ನಂತರ ಹಳ್ಳಿಯ ಬಯಲಾಟ. ಗದಾಯುದ್ಧ ಪ್ರಸಂಗ. ನನ್ನದು ಅಶ್ವತ್ಥಾಮ. ನನ್ನಪ್ಪ ಆಟದ ದಿನ ಬೆಳಿಗ್ಗೆ ಟೀಕೆ ಮಾಡಿದ್ದ, “ಅಶ್ವತ್ಥಾಮ ಹೋಗಿ ಅಸ್ವಸ್ತತ್ಥಾಮ” ಆಗಬಹುದು ಎಂದು.
“ಗುರು ಸುತ ಅಶ್ವತ್ಥಾಮನೈತಂದನಾಗ’ ಪ್ರವೇಶ ಪದ್ಯ. ಬೆಂಕಿಯ ಚೆಂಡಿನಂತೆ ಪ್ರವೇಶಮಾಡಬೇಕು. ನಾನು ಪ್ರವೇಶ ಮಾಡಿದೆ. ಎದುರಿಗೆ ಅಪ್ಪ ಕುಳಿತಿದ್ದ. ಬೆಂಕಿಯ ಚಂಡಿಗೆ ನೀರು ಬಿದ್ದ ಸ್ಥಿತಿ ನನ್ನಾದಾಗಿತ್ತು.
ಇನ್ನೊಂದು ಬ್ರಹ್ಮಕಪಾಲದ ಕಿರಾತನ ಪಾತ್ರ. ಗಿರಿಗಡ್ಡೆ ಭಾಗವತರು ಪದ್ಯ ಹೇಳುತ್ತಿದ್ದರು. ಪದ್ಯ ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಮದ್ದಲೆಯಲ್ಲಿ ಶಂಕರ ಭಾಗವತರು ಇದ್ದರು. ಅವರು ಸ್ವಲ್ಪ ಜೋರಾಗಿಯೇ ಇದು ಮುಕ್ತಾಯದ ಬಿಡ್ತಿಗೆ ಅಂದರು. ಇಲ್ಲದಿದ್ದರೆ ಪದ್ಯ ಮುಗಿದ ಮೇಲೂ ಹೆಜ್ಜೆ ಹಾಕುವ ಸ್ಥಿತಿ ಇರುತ್ತಿತ್ತು.
ಹೊಸತಾಗಿ ಪಾತ್ರ ಮಾಡಿದಾಗ ಆದ ನನ್ನ ಅನುಭವವಿದು. ಮುಂದಿ ಕಂತಿನಲ್ಲಿ ಹಳ್ಳಿ ಆಟದ ಗಮ್ಮತ್ತನ್ನು ಹೇಳುತ್ತೇನೆ.

2 comments:

Followers

FEEDJIT Live Traffic Feed