Friday, September 11, 2009

ಯಕ್ಷಗಾನದ ಕಣ್ಮಣಿ ಚಿಟ್ಟಾಣಿ





ಕ್ರವ್ಯೂಹ ಪ್ರಸಂಗ: ಧರ್ಮರಾಯ ದುಗುಡದಲ್ಲಿ ಕುಳಿತಿದ್ದಾನೆ. ಇದನ್ನು ತಿಳಿದ ಅಭಿಮನ್ಯು ಮಿಂಚಿನ ವೇಗದಲ್ಲಿ ರಂಗಪ್ರವೇಶ ಮಾಡುತ್ತಾನೆ. ಹೀಗೆ ಪ್ರವೇಶದಲ್ಲೇ ಮಿಂಚಿನ ಸಂಚಲನ ಉಂಟುಮಾಡುವ ಕಲಾವಿದ ಮತ್ತಾರೂ ಅಲ್ಲ. ಹೊಸಾಕುಳಿ ರಾಮಚಂದ್ರ ಹೆಗಡೆ. ಅಂದರೆ ಯಕ್ಷಪ್ರೇಮಿಗಳ ಅಭಿಮಾನದ ಚಿಟ್ಟಾಣಿ. ಯಕ್ಷಗಾನದಲ್ಲಿ ಮಾಸ್ಅಭಿಮಾನಿಗಳನ್ನು ಹೊಂದಿರುವ ಕಲಾವಿದ. `ಚಿಟ್ಟಾಣಿ ಶೈಲಿ' ಎಂಬುದನ್ನು ಹುಟ್ಟುಹಾಕಿದ ಕೀರ್ತಿ ಇವರದ್ದು.

ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಹುಟ್ಟೂರು. 1935ರಲ್ಲಿ ಜನನ. ಗಣಪಿ ಮಗನಾಗಿ ಜನಿಸಿದ ಚಿಟ್ಟಾಣಿ ಅವರಿಗೆ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಅತೀವ ಆಸಕ್ತಿ. ಇವರು ಎರಡನೇ ತರಗತಿಯನ್ನೂ ಪೂರ್ಣಗೊಳಿಸಲಿಲ್ಲ. ಇದಕ್ಕೆ ಇವರಲ್ಲಿರುವ ಯಕ್ಷಗಾನದ ತೀವ್ರ ಸೆಳೆತ ಕಾರಣವಾಗಿತ್ತು. ಶಾಲೆಗೆ ಹೋಗುವ ಬದಲು ಗೇರು ಬೆಟ್ಟದ ಮೇಲೆ ಕುಣಿಯ ತೊಡಗಿದರು.

ಕೊಂಡದಕುಳಿ ರಾಮ ಹೆಗಡೆ, ಕೆರೆಮನೆ ಶಿವರಾಮ ಹೆಗಡೆ, ಮೂಡ್ಕಣಿ ನಾರಾಯಣ ಹೆಗಡೆ, ಕರ್ಕಿ ಪರಮಯ್ಯ ಹಾಸ್ಯಗಾರ ಇವರ ಮೇಲೆ ತುಂಬಾ ಪ್ರಭಾವ ಬೀರಿದರು. ಯಕ್ಷಗಾನ ಕಲಿಯುವ ಮನಸ್ಸಾಯಿತು. ಆದರೆ ಮನೆಯಲ್ಲಿ ಇದಕ್ಕೆ ಬೆಂಬಲ ಇರಲಿಲ್ಲ. ಮನೆ ಕೆಲಸ ಮಾಡುತ್ತೇನೆ ಎಂದು ಶಾಲೆ ಬಿಟ್ಟಿದ್ದ ಇವರು ಸೊಪ್ಪು ತರುತ್ತೇನೆ ಎಂದು ಹೇಳಿ ಯಕ್ಷಗಾನ ಕಲಿಯಲು ಹೋಗುತ್ತಿದ್ದರು. ಸಂತೆಕುಳಿ ರಾಮಕೃಷ್ಣ ಭಟ್ಟರು ಇವರ ಮೊದಲ ಗುರುಗಳು. ನಂತರ ನೋಡಿ ಕಲಿತಿದ್ದೆ ಹೆಚ್ಚು. ನಾಟ್ಯದ ಲಯದಲ್ಲಿ ಹಿಡಿತ ಇದ್ದ ಇವರಿಗೆ ಯಾವ ಪಾತ್ರ ಮಾಡಿದರೂ ಜನಮೆಚ್ಚುವಂತಾಯಿತು.

ಕೆರೆಮನೆ ಶಿವರಾಮ ಹೆಗಡೆ ಅವರ ಕೌರವನ ಪಾತ್ರ ಇವರ ಮೇಲೆ ಬಹಳ ಪರಿಣಾಮ ಬೀರಿತು. ಇವರ ಪ್ರಥಮ ಕೌರವನ ವೇಷ ನೋಡಿದ ಶಿವರಾಮ ಹೆಗಡೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಚಿಟ್ಟಾಣಿಗೆ ಶ್ರೀರಕ್ಷೆ ಆಯಿತು. ಬಯಲಾಟದ ಮೂಲಕ ಯಕ್ಷಗಾನ ವೇಷವನ್ನು ಪ್ರಾರಂಭಿಸಿದರು. ಮೂಡ್ಕಣಿ ಮೇಳ ಇವರ ಮೊದಲ ವೃತ್ತಿ ಮೇಳ. ನಂತರ ಬಾಳೆಗದ್ದೆ ಮೇಳ, ಮೂರುರು ಮೇಳ, ಗುಂಡಬಾಳ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಸಂಯುಕ್ತ ಮಂಡಳಿ, ಕೊಳಗೀಬೀಸ್‌, ಅಮೃತೇಶ್ವರಿ, ಪಂಚಲಿಂಗ, ಶಿರಸಿ, ಸಾಲಿಗ್ರಾ, ಪೆರ್ಡೂರು, ಬಚ್ಚಗಾರು ಮೇಳಗಳಲ್ಲಿ ಇವರು ಮುಖ್ಯ ಕಲಾವಿದರಾಗಿ ಸೇವೆ ಸಲ್ಲಿಸಿದರು. ಸದ್ಯ ವೀರಾಂಜನೇಯ ಮೇಳ ಬಂಗಾರಮುಕ್ಕಿ ಇದರ ಮುಖ್ಯ ಕಲಾವಿದರು. ಅತಿಥಿ ಕಲಾವಿದರಾಗಿ ಎಲ್ಲಾ ಮೇಳಗಳಲ್ಲೂ ಪಾತ್ರ ನಿರ್ವಹಿಸುತ್ತಿದ್ದಾರೆ. ಸಣ್ಣ ಪಾತ್ರ ನಿರ್ವಹಿಸುತ್ತಾ ಮೇಲೆ ಬಂದವರು ಚಿಟ್ಟಾಣಿ. ಹೆಣ್ಣು ವೇಷ ಮಾಡಿದ ಅನುಭವವೂ ಇವರಿಗಿದೆ. ಇವರ ಅನೇಕ ಪಾತ್ರಗಳು ಇಂದಿಗೂ ಜನಜನಿತ. ಕವಿರತ್ನ ಕಾಳಿದಾಸದ ಇವರ ಕಲಾಧರನ ಪಾತ್ರ ಬಹಳ ಹೆಸರುವಾಸಿ ಆಗಿತ್ತು. `ಕಲಾಧರ ಹೆಗಡೆ' ಎನ್ನುವ ಅಡ್ಡ ಹೆಸರು ಇವರಿಗೆ ಬಂತು. 1967ನೇ ಇಸವಿಯಲ್ಲಿ ಕಡತೋಕಾ ಕೃಷ್ಣ ಭಾಗವತರು ಮೊದಲು `ಚಿತ್ರಾಕ್ಷಿ ಕಲ್ಯಾಣ' ಪ್ರಸಂಗ ಆಡಿಸಿದರು. ಅದರ `ರುದ್ರಕೋಪ' ಪಾತ್ರ ಚಿಟ್ಟಾಣಿ ಅವರ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಿತು.

ಶೃಂಗಾರ, ಖಳ ಪಾತ್ರಗಳಿಗೆ ಚಿಟ್ಟಾಣಿ ಹೊಸ ಭಾಷ್ಯ ಬರೆದರು. ಘಟೋದ್ಗಜ, ಕೀಚಕ, ಮಾಗಧ, ದುಷ್ಟಬುದ್ಧಿ, ಕೌರವ, ಉಗ್ರಸೇನ, ಭಸ್ಮಾಸುರ, ಕಲಾಧರ, ಕೃಷ್ಣ, ಸುಧನ್ವ, ಬಬ್ರುವಾಹನ, ಅಭಿಮನ್ಯು, ಸಾಲ್ವ, ಪಾಪಣ್ಣ ಮುಂತಾದ ಪೌರಾಣಿಕ ಪ್ರಸಂಗಗಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ. ಹೊಸ ಪ್ರಸಂಗಗಳಲ್ಲೂ ಚಿಟ್ಟಾಣಿ ಅವರ ತಮ್ಮದೇ ಶೈಲಿಯಲ್ಲಿ ಪಾತ್ರ ನಿರ್ವಹಿಸಿ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

`ಏಸುಕ್ರಿಸ್ತ ಮಹಾತ್ಮೆ' ಎನ್ನುವ ಪ್ರಸಂಗದಲ್ಲಿ ಇವರು ನಿರ್ವಹಿಸುವ ಸೈತಾನನ ಪಾತ್ರ ನೋಡಿದ ಪಾದ್ರಿಗಳು `ನಿಜವಾದ ಸೈತಾನ ಹೀಗೆ ಇದ್ದಿದ್ದನೋ! ಎಂದು ಭಾಸವಾಗುತ್ತಿದೆ' ಎನ್ನುವ ಮೆಚ್ಚುಗೆ ಮಾತು ಆಡಿದ್ದನ್ನು ಇವರ ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ. ಚಿಟ್ಟಾಣಿ ಅವರಿಗೆ ಇವರೇ ಹಿಮ್ಮೇಳದಲ್ಲಿ ಇರಬೇಕು ಎಂಬುದಿಲ್ಲ. ಎದುರಿಗಿರುವ ಹೊಸ ಕಲಾವಿದನಿಗೆ ತೊಂದರೆ ಕೊಡಬೇಕೆಂಬ ಮನೋಭಾವವಿಲ್ಲ. ಎಲ್ಲಾ ಕಲಾವಿದರು ಒಂದೇ. ಅಭಿಮಾನಿಗಳು ಎಂದರೆ ಅನ್ನದಾತರು ಎನ್ನುವ ಮನೋಭಾವ ಇವರದ್ದು.

`ನಾನು ಯಾರನ್ನೂ ಮೆಚ್ಚಿಸಲು ಕುಣಿಯುವುದಿಲ್ಲ. ಪ್ರತಿ ಯಕ್ಷಗಾನ ನನ್ನ ಪ್ರಥಮ ಪ್ರಯೋಗ ಎಂದು ತಿಳಿದು ಪಾತ್ರ ನಿರ್ವಹಿಸುತ್ತೇನೆ. ಹೊಸತು ಕೊಡಲು ಪ್ರಯತ್ನಿಸುತ್ತೇನೆ. ಪ್ರೇಕ್ಷಕರು ಇರುವುದು, ಇಲ್ಲದಿರುವುದು ನನಗೆ ಮುಖ್ಯ ಅಲ್ಲ. ಯಕ್ಷಗಾನ ಕುಣಿಯಬೇಕು ಎನ್ನುವುದು ನನ್ನ ಹಂಬಲ' ಎನ್ನುತ್ತಾರೆ ಚಿಟ್ಟಾಣಿ. ಸಾವಿರಾರು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಅಭಿಮಾನಿಗಳು ಬೆಳ್ಳಿ ಕಿರೀಟ ನೀಡಿದ್ದಾರೆ. ರಂಗರಾಜ, ರಸರಾಜ, ನಾಟ್ಯಸಾರ್ವಭೌಮ, ಯಕ್ಷರತ್ನ ಬಿರುದುಗಳು ಬಂದಿವೆ. ರಾಜ್ಯ ಪ್ರಶಸ್ತಿ, ಜಾನಪದ ಶ್ರೀ ಪ್ರಶಸ್ತಿ ಲಭಿಸಿವೆ. ಇವರ ಮೇಲೆ ಎರಡು ಮಹಾಪ್ರಬಂಧಗಳು ರಚನೆಯಾಗಿವೆ.

ಅಂದಹಾಗೆ ಚಿಟ್ಟಾಣಿ ಅವರಿಗೆ ಈಗ 74 ಪ್ರಾಯ. ವೇಷ ಕಟ್ಟಿ ರಂಗಕ್ಕೆ ಬಂದರೆ ಇನ್ನೂ 24 ಯುವಕ. ಪತ್ನಿ ಸುಶೀಲಾ ಇವರ ಸ್ಫೂರ್ತಿ. ಮೂರು ಮಕ್ಕಳಲ್ಲಿ ಸುಬ್ರಮಣ್ಯ ಮತ್ತು ನರಸಿಂಹ ಚಿಟ್ಟಾಣಿ ಯಕ್ಷರಂಗಕ್ಕೆ ಬಂದಿದ್ದಾರೆ. ನಾರಾಯಣ ಅವರದು ಕೃಷಿ.








ಚಿಟ್ಟಾಣಿ ಯಕ್ಷಗಾನ ರಂಗಕ್ಕೆ ಕಾಲಿರಿಸಿ 60 ವರ್ಷ. ಇದರ ಪ್ರಯುಕ್ತ ಮ್ಮೂರ ಹೋಟೆಲ್ಚಿಟ್ಟಾಣಿ ರಾಮಚಂದ್ರ ಹೆಗಡೆ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದೆ. ಇದೇ ವೇಳೆ ಸಾಲಿಗ್ರಾಮ ಮತ್ತು ಬಂಗಾರಮಕ್ಕಿ ಮೇಳದ ಕೂಡುವಿಕೆಯಲ್ಲಿ ಶ್ರೀಕೃಷ್ಣ ಸಂಧಾನ ಮತ್ತು ಚಕ್ರಚಂಡಿಕೆ ಪ್ರಸಂಗಗಳ ಪ್ರದರ್ಶನ.

ಸ್ಥಳ: ರವೀಂದ್ರಕಲಾಕ್ಷೇತ್ರ, ಸೆ. 13ರಂದು, ಸಮಯ: ಮಧ್ಯಾಹ್ನ 3-30ರಿಂದ

No comments:

Post a Comment

Followers

FEEDJIT Live Traffic Feed