Friday, June 19, 2009

ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ


ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ ಕೆಸರಕೊಪ್ಪದ ವಿಘ್ನೇಶ್ವರ ಗೌಡ ಅವರಿಗೆ ಇತ್ತೀಚೆಗೆ ಹಾರ್ಸಿಕಟ್ಟಾದಲ್ಲಿ ಯಕ್ಷಗಾನ ಕಲಾವಿದ ಡಿ.ಜಿ.ಹೆಗಡೆ ಮತ್ತಿಗಾರ ನೆನಪಿನ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ನಿಮಿತ್ತ ಎಲೆಮರೆಯ ಕಾಯಿಯಾಗಿಯೇ ಇದ್ದ ಚಂಡೆ ವಾದಕರ ಪರಿಚಯ ಮಾಡುವ ಬರಹ ಇದು.
ಇಂದಿಗೂ ಬಹುಪಾಲು ಜನರಿಗೆ ಯಕ್ಷಗಾನ ಎಂದಾಕ್ಷಣ ನೆನಪಾಗುವದು ಚಂಡೆ. ಚಂಡೆಯ ಸದ್ದು ಕೇಳಿದೊಡನೇ ಯಕ್ಷಗಾನ ನೋಡಿ ಬರೋಣ ಎನಿಸುತ್ತದೆ. ಇಂಥ ಮಾದಕ ಆಕರ್ಷಣೆಯ ಚಂಡೆಯ ವಾದಕ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ, ಅದರಾಚೆ ಕೂಡ ಪ್ರಸಿದ್ಧಿ ಪಡೆದು ಮನೆ ಮಾತಾದವರು ವಿಘ್ನೇಶ್ವರ ಗೌಡ ಕೆಸರಕೊಪ್ಪ. ಓದಿದ್ದು ನಾಲ್ಕನೇ ಈಯತ್ತೆಯಾದರೂ ಚಂಡೆ ವಾದನದ ಗುಂಗಿನಲ್ಲಿ ಚಂಡೆ ಕಲಿತು ಇಂದು ಚಂಡೆ ವಾದನದಲ್ಲಿ ಹೆಸರುಗಳಿಸಿಕೊಂಡಿದ್ದಾರೆ, ಗಳಿಸಿದ ಹೆಸರನ್ನು ಉಳಿಸಿಕೊಂಡಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಕಾನಗೋಡ ಸಮೀಪದ ಕೆರಸಕೊಪ್ಪದ ಊರಿನ ವಿಘ್ನೇಶ್ವರ ಬದುಕಿಗೆ ವಾಹನವನ್ನು ಬಾಡಿಗೆಗೆ ಓಡಿಸುತ್ತಾರೆ. ಅದರ ಮಧ್ಯೆ, ಕೆಲವೊಮ್ಮೆ ಬಂದ ಬಾಡಿಗೆಯನ್ನೂ ಬಿಟ್ಟು ಯಕ್ಷಗಾನಕ್ಕೆ ಹೋಗುತ್ತಾರೆ. ಇಂಥ ಅಪ್ಪಟ ಕಲಾ ಸೇವಕ ದ್ಯಾವ ಗೌಡ ಮತ್ತು ನಾಗವೇಣಿ ಅವರ ನಾಲ್ಕನೇ ಮಗ. ನಾಲ್ಕನೇ ತರಗತಿಗೆ ಗೋಲಿ ಹೊಡೆದು ಶಂಕರ ಭಾಗವತ ಗಿರಿಗಡ್ಡೆ ಅವರ ಮಾರ್ಗದರ್ಶನದಲ್ಲಿ ಶಂಕರ ಭಾಗವತ ಯಲ್ಲಾಪುರ ಅವರಲ್ಲಿ ಚಂಡೆ ವಾದನದ ಗತ್ತನ್ನು ಕಲಿತರು. ಪ್ರಾರಂಭದಲ್ಲಿ ಬಾಲ ವೇಷಗಳ್ನೂ ಹಾಕಿದ ವಿಘ್ನೇಶ್ವರ ಗೌಡ, ತಮ್ಮ ಇಪ್ಪತ್ತನೇ ವರ್ಷದಿಂದಲೇ ಚಂಡೆಯ ಮೂಲಕ ಯಕ್ಷಗಾನ ಕಲಾವಿದರನ್ನು ಕುಣಿಸಲು ಪ್ರಾರಂಭಿಸಿದರು. ಪಂಚಲಿಂಗೇಶ್ವರ, ವೀರಾಂಜನೇಯ ಹಾಗೂ ಕೆರೆಮನೆ ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಕೂಡ ಹಿಮ್ಮೇಳದಲ್ಲಿ ಚಂಡೆ ವಾದನ ಮಾಡಿದ ಗೌಡ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ಭಟ್ಟ, ಗಣಪತಿ ಹೆಗಡೆ ಸೇರಿದಂತೆ ಪ್ರಮುಖ ಕಲಾವಿದರೂ ಇವರ ಚಂಡೆಗೆ ಹೆಜ್ಜೆ ಹಾಕಿದ್ದಾರೆ. ನೆಬ್ಬೂರು ನಾರಾಯಣ ಭಾಗವತ್‌, ಕೇಶವ ಹೆಗಡೆ, ಸುಬ್ರಹ್ಮಣ ಧಾರೇಶ್ವರ ಸೇರಿದಂತೆ ಪ್ರಮುಖ ಭಾಗವತರ ಹಾಡುಗಾರಿಕೆಗೂ ಸಾತ್‌ ನೀಡಿದ್ದಾರೆ. ಈಗಗಾಲೇ ಐದು ಸಾವಿರಕ್ಕೂ ಅಧಿಕ ಯಕ್ಷಗಾನಗಳಲ್ಲಿ ಚಂಡೆ ವಾದನ ಮಾಡಿದ್ದಾರೆ ಇವರು. ಇವರ ಚಂಡೆಯಲ್ಲಿ ಲಯ ಬದ್ಧತೆ, ಸ್ಪಷ್ಟತೆ, ವೇಗ ಇರುವ ಕಾರಣ ವಿಘ್ನೇಶ್ವರ ಗೌಡ ಅವರ ಚಂಡೆ ಎಂದರೆ ಯಕ್ಷಗಾನ ನೋಡಲು ಬರುವ ಪ್ಷೇಕ್ಷಕರ ಸಂಖ್ಯೆ ಕೂಡ ವೃದ್ಧಿಸುತ್ತಿದೆ. ಬೆಂಗಳೂರು, ಮಂಗಳೂರು, ಉಡುಪಿ, ದೆಹಲಿ, ಬಾಂಬೆ ಸೇರಿದಂತೆ ವಿವಿಧಡೆ ತಮ್ಮ ಕಲಾ ಸೇವೆ ನೀಡಿರುವ ಇವರನ್ನು ಮಂಗಳವಾರ ಜೂ.16ರ ಸಂಜೆ ಹಾರ್ಸಿಕಟ್ಟಾದ ದಿವಾನ್‌ ಯಕ್ಷ ಸಮೂಹ ಗೌರವಿಸಲಿದೆ. ಸಾರ್ಥಕ ಸೇವೆಗೆ ಸಂದ ಗೌರವ ಇದಾಗಿದೆ. ಎಲೆಮರೆಯಾಗಿಯೇ ಇದ್ದ ಗೌಡರನ್ನು ಗೌರವಿಸುವ ಮೂಲಕ ಯಕ್ಷ ಸಮೂಹ ಕೂಡ ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿದೆ.
ರಾಘವೇಂದ್ರ ಬೆಟ್ಟಕೊಪ್ಪ
( udayavani dina patrike krape)

1 comment:

  1. ನಮ್ಮ ಯಕ್ಷಗಾನದ ಬಗ್ಗೆ ಬ್ಲಾಗ್ ನೋಡಿ ತುಂಬಾ ಖುಷಿ ಆತು .ನಮ್ಮ ನಡುವಿನ ಕಲೆಗಾರರ ಬಗ್ಗೆ ಮಾಹಿತಿಯನ್ನು ಕೊಡುವುದನ್ನು ಮುಂದುವರೆಸಿರಿ . ದನ್ಯವಾದ.

    ReplyDelete

Followers

FEEDJIT Live Traffic Feed