Tuesday, June 23, 2009

`ವಿಶೇಷ ಸಮರಂಗ`




ಹೊಸ ಪ್ರಸಂಗಗಳ ಅಬ್ಬರದಲ್ಲಿ ಪೌರಾಣಿಕ ಪ್ರಸಂಗಗಳು ಹೊಸ ವೀಕ್ಷಕರನ್ನು ಕಳೆದುಕೊಳ್ಳುತ್ತಿವೆ. ಹಾಗೆಂದು ಪೌರಾಣಿಕ ಪ್ರದರ್ಶನಗಳು ಕಡಿಮೆಯಾಗಿವೆ ಎಂದರ್ಥವಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ಪೌರಾಣಿಕ ಪ್ರಸಂಗಳು ಪ್ರದರ್ಶನಗೊಳ್ಳುತ್ತಿವೆ. ಇದೊಂದು ಆರೋಗ್ಯಕರ ಬೆಳವಣಿಗೆ. ಪೌರಾಣಿಕ ಕಥಾನಕಗಳಲ್ಲೂ ಹೊಸತನ ಕಾಣಬಹುದು. ಹೆಚ್ಚಿನ ಪ್ರಯೋಗಗಳ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನ ಕಂಡ `ವಿಷಮ ಸಮರಂಗ' ಪ್ರಸಂಗ.
ಇದು ಕೃಷ್ಣನ ಜನ್ಮದಿಂದ ನಿರ್ಯಾಣದವರೆಗಿನ ಕಥಾನಕಗಳ ಗುಚ್ಛ. ಕೃಷ್ಣನ ಲೀಲೆ, ಕಂಸವಧೆ, ಪಾಂಚಜನ್ಯ ಮೋಕ್ಷ, ಬಲರಾಮ ರೇವತಿ ವಿವಾಹ, ಶ್ರೀಕೃಷ್ಣ ಪರಂಧಾಮದವರೆಗಿನ ಕತೆಗಳ ಸಂಯೋಜನೆ ಈ `ವಿಷಮ ಸಮರಂಗ'.
ಪ್ರಸಂಗದ `ಕಂಸವಧೆ' ಆಖ್ಯಾನದಲ್ಲಿ ಕಂಸನಾಗಿ ಹುಡುಗೋಡು ಚಂದ್ರಹಾಸ, ಕೃಷ್ಣನಾಗಿ ಕಣ್ಣಿಮನೆ ಗಣಪತಿ ಭಟ್ಟ ಮತ್ತು ಬಲರಾಮನಾಗಿ ನರಸಿಂಹ ಗಾಂವಕರ್‌ ಕಾಣಿಸಿಕೊಂಡಿದ್ದರು. ಕಣ್ಣಿಮನೆ ತಮ್ಮ ಕುಣಿತಕ್ಕೆ ಇನ್ನಷ್ಟು ಹೊಸತನ್ನು ಕೊಟ್ಟರು. `ಮರೆತು ನಿಲುವುದೇಕೆ ಮಾವ ಅಳಿಯನಲ್ಲವೇ' ಎನ್ನುವ ಪದ್ಯಕ್ಕೆ ಅವರ ಅಭಿನಯ ಅದ್ಭುತ. ಕುಣಿತದಲ್ಲಿ ಅವರದು ಬಹುಬಗೆ. ಕೆಲವು ಕಡೆ ಕುಣಿತ ಹೆಚ್ಚೆನಿಸಿದರೂ ಪುಂಡ ಕೃಷ್ಣನಿಗೆ ಅದು ಓಕೆ. ಆದರೆ ಬಲರಾಮನ ಪಾತ್ರದಾರಿ ಗಾಂವಕರ್‌ ಅವರ ಕುಣಿತ ಸ್ವಲ್ಪ ಹೆಚ್ಚಾಯಿತು ಎಂದು ಅನಿಸಿದರೆ ತಪ್ಪಲ್ಲ. ಅಕ್ರೂರನಾಗಿ ಆಲ್ಮನೆ ಪದ್ಮನಾಭ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. `ಉರಿಯುವುದೊಂದೆ ದೀಪವು ಎರಡಾಗುತ್ತಿದೆ' ಮತ್ತು `ನೆತ್ತಿಗೆ ತೈಲವ ಒತ್ತುತ' ಪದ್ಯಕ್ಕೆ ಪ್ರೇಕ್ಷಕರ ನಿರೀಕ್ಷೆಯ ಅಭಿನಯ ನೀಡುವಲ್ಲಿ ಕಂಸ ಸಫಲನಾಗಲಿಲ್ಲ. ಆದರೆ ಉಳಿದ ಭಾಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿ ನೃತ್ಯ, ಅಭಿನಯ, ಸಂಭಾಷಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಾಡಿ ಜಯರಾಂ ಶೆಟ್ಟರ `ರಜಕ' ನಿಜಕ್ಕೂ ರಂಜಕನಾಗಿದ್ದ. ಎಲ್ಲಿಯೂ ಯಕ್ಷಗಾನ ಚೌಕಟ್ಟನ್ನು ಮೀರದ ಶ್ರೇಷ್ಠ ಹಾಸ್ಯ, ಅನುಭವದ ಅಭಿನಯ ಅವರದಾಗಿತ್ತು.
ಪ್ರಸಂಗದ ಎರಡನೇ ಭಾಗವಾದ `ಪಾಂಚಜನ್ಯ ಮೋಕ್ಷ'ದಲ್ಲಿ ಕೃಷ್ಣನ ಗುರುವಾದ ಸಾಂದೀಪ ಋಷಿ ಕತೆ ಬರುತ್ತದೆ. ಇದರಲ್ಲಿ ಕೃಷ್ಣನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಇಷ್ಟವಾದರು. ಕೃಷ್ಣ ಮತ್ತು ಪಾಂಚಜನ್ಯ ರಾಕ್ಷಸನ ನಡುವಿನ ಸಂಭಾಷಣೆ ಭಾಗ ಅಪರೂಪವಾಗಿತ್ತು. ಮತ್ಯುಕನ್ನೆಯ ಮಗಳಾದ `ಅತಿಕೆ'ಯಾಗಿ ಶಿವಕುಮಾರ್‌ ಬೇಗಾರ್‌ ಅವರ ನಿರ್ವಹಣೆ ಉತ್ತಮ.`ಸ್ತ್ರೀಯರು ಯುದ್ಧಕ್ಕೆ ಯೋಗ್ಯರಲ್ಲ ಮನೆ ಕೆಲಸ ಮಾತ್ರಕ್ಕೆ ಯೋಗ್ಯ' ಎಂದು ಅಪಹಾಸ್ಯ ಮಾಡುವ `ತರುಣಿಯರ ಅಗ್ಗಳಿಕೆ' ಎನ್ನುವ ಪದ್ಯಕ್ಕೆ ಕೊಂಡದಕುಳಿ ಅವರು ಶ್ರೇಷ್ಠ ಅಭಿನಯ ನೀಡಿದರು.
ಪ್ರಸಂಗದ ಮೂರನೇ ಭಾಗವಾಗಿ `ಬಲರಾಮ ವಿವಾಹ' ಮತ್ತು `ಶ್ರೀಕೃಷ್ಣ ಪರಂಧಾಮ' ಕಥಾನಕದಲ್ಲಿ ಬಲರಾಮನಾಗಿ ಬಳ್ಕೂರು ಕೃಷ್ಣಯಾಜಿ ರಂಗದಲ್ಲಿ ಮಿಂಚಿನ ಸಂಚಲನ ಮೂಡಿಸುವಲ್ಲಿ ಸಫಲರಾದರು. ರೇವತಿ ಮತ್ತು ಬಲರಾಮ ಸಂಭಾಷಣೆ ರಂಜನೀಯವಾಗಿತ್ತು. ಬೆಳಗಿನ ಜಾವಕ್ಕೆ ಈ ಭಾಗ ಬಂದಿದ್ದರಿಂದ ನಿದ್ದೆಯ ಮಂಪರಿನಿಂದ ಪ್ರೇಕ್ಷಕರು ಸಂಪೂರ್ಣ ಎಚ್ಚರಗೊಳ್ಳುವಂತಾಯಿತು.
ಸ್ತ್ರೀ ಪಾತ್ರದಲ್ಲಿ ಹೆಚ್ಚಿನ ಅನುಭವವಿರುವ ಶಶಿಕಾಂತ ಶೆಟ್ಟಿ ಅವರು ಅಂದು ಶ್ರೀಕೃಷ್ಣನ ಪಾತ್ರ ನಿರ್ವಹಿಸಿದರು. ಪರಂಧಾಮ ಗೈಯುವ ಭಾಗದ ಸಂಭಾಷಣೆ ಭಾವನಾತ್ಮಕವಾಗಿತ್ತು.
ಭಾಗವತರಾಗಿ ರವಿ ಸುರಾಲ್‌, ರಾಘವೇಂದ್ರ ಮಯ್ಯ ಮತ್ತು ಹೆರಂಜಾಲು ಗೋಪಾಲ ಗಾಣಿಗ ಅವರು ಉತ್ತಮವಾಗಿ ಹಾಗೂ ಸಾಹಿತ್ಯ ಸ್ಪಷ್ಟವಾಗಿ ಹಾಡಿದರು. ಹಿಮ್ಮೇಳ ಕಲಾವಿದರಿಗೆ ಪೂರಕವಾಗಿತ್ತು. ಶಿವಾನಂದ ಕೋಟ ಅವರು ನಾಲ್ಕು ಚೆಂಡೆಯನ್ನು ಏಕಕಾಲಕ್ಕೆ ನುಡಿಸಿ ರಂಜಿಸಿದರು.
ಅವಿಭಜಿತ ದಕ್ಷಿಣ ಕನ್ನಡ ವಕೀಲರ ಸಂಘದವರು ಈ ಯಕ್ಷಗಾವನ್ನು ಆಯೋಜಿಸಿದ್ದರು. ಇಂತಹ ಅಪರೂಪದ ಪೌರಾಣಿಕ ಪ್ರಸಂಗ ಯಕ್ಷಪ್ರಿಯರಿಗೆ ನೀಡಿದ ವಕೀಲರ ಸಂಘದವರು ಅಭಿನಂದನಾರ್ಹರು.

No comments:

Post a Comment

Followers

FEEDJIT Live Traffic Feed