Tuesday, August 4, 2009

ಪುರೋಹಿತನಾಗಬೇಕಿತ್ತು,ಕಲಾವಿದನಾದೆ


ಹೆಸರು: ಭಾಸ್ಕರ ಜೋಶಿ
ಯಕ್ಷಗಾನದ ಪ್ರಸಿದ್ಧ ಸ್ತ್ರೀ ಪಾತ್ರದಾರಿ
ತಂದೆ: ನಾರಾಯಣ ಜೋಶಿ, ತಾಯಿ: ಗಂಗಾ ಜೋಶಿ
ಪತ್ನಿ: ಮಾಲಿನಿ ಜೋಶಿ
ಮಕ್ಕಳು: ಸ್ಪೂರ್ತಿ, ರಘುರಾಂ
ಜನ್ಮ ದಿನಾಂಕ: 30-04-1956



ನನ್ನದು ಬಡ ಕುಟುಂಬ. ಪೌರೋಹಿತ್ಯದಿಂದ ಜೀವನ ಸಾಗಿಸುತ್ತಿದ್ದ ಅಪ್ಪ, ಅಮ್ಮ. ಉತ್ತರಕನ್ನಡದ ಸಿದ್ದಾಪುರ ತಾಲೂಕಿನ ಶಿರಳಗಿ ನನ್ನ ಊರು. ಕನಸು ಕಾಣುವಷ್ಟು ಅವಕಾಶಗಳು ನನಗಿರಲಿಲ್ಲ. ಆದರೆ ಬಣ್ಣದ ಹುಚ್ಚು ಚಿಕ್ಕಂದಿನಿಂದಲೂ ಇತ್ತು. ಅದನ್ನು ಕರಗತ ಮಾಡಿಕೊಳ್ಳಲು ತೊಡಗದಿದ್ದರೆ ಅಪ್ಪನ ಹಾದಿಯಲ್ಲೇ ನಾನು ನಡೆಯಬೇಕಿತ್ತು.
ಹೈಸ್ಕೂಲ್‌ ಮುಗಿದ ನಂತರವೂ ಕಾಡುತ್ತಿದ್ದ ಬಡತನ ಕಾಲೇಜಿಗೆ ಹೋಗಲು ಬಿಡಲಿಲ್ಲ. ನನ್ನ ಮೊದಲ ರಂಗಪ್ರವೇಶ ನಾಟಕದ ಮೂಲಕ. ಹುಲಿಮನೆ ಸೀತಾರಾಂ ಶಾಸ್ತ್ರಿ ಅವರ ನಿರ್ದೇಶನದ `ಪನ್ನಾದಾಸಿ' ನಾಟಕ ಅದು. ಆಗ ಸ್ತ್ರೀ ಪಾತ್ರವನ್ನು ಪುರುಷರೇ ಮಾಡುತ್ತಿದ್ದರು. ನನ್ನ ಕಲಾಯಾತ್ರೆ ಸ್ತ್ರೀ ವೇಷದಿಂದಲೇ ಪ್ರಾರಂಭವಾಯಿತು.
ಅದೇ ವರ್ಷ ಸಿದ್ದಾಪುರ ಕಾಲೇಜಿನಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ತರಬೇತಿ ನೀಡುತ್ತಿದ್ದರು. ಅಲ್ಲಿ ನಾನು ಸೇರಿಕೊಂಡೆ. ಈ ಸಂದರ್ಭದಲ್ಲಿ ನಾಟಕ ಪ್ರದರ್ಶನ ನಡೆಯುತ್ತಿತ್ತು. ನಮ್ಮೂರಿನವರೇ ಆದ ಯಕ್ಷಗಾನ ಕಲಾವಿದ ಕೊಳಗಿ ಅನಂತ ಹೆಗಡೆ ಅವರ ಜೊತೆ ಕೆರೆಮನೆ ಗಜಾನನ ಹೆಗಡೆ ನಾಟಕ ನೋಡಲು ಬಂದರು. ಅವರು ನನ್ನ ಪಾತ್ರ ಮೆಚ್ಚಿ ಕೆರೆಮನೆ ಮೇಳಕ್ಕೆ ಆಹ್ವಾನಿಸಿದರು.
ನನ್ನ ಕನಸು ಪ್ರಾರಂಭವಾದದ್ದು ಆ ಮೇಳ ಸೇರಿದ ಮೇಲೆ. ಎಲ್ಲರೂ ಮೆಚ್ಚುವ ಸ್ತ್ರೀ ಪಾತ್ರದಾರಿಯಾಗಬೇಕು, ವೃತ್ತಿ ಮೇಳದ ಹ್ಯಾಂಡ್‌ಬಿಲ್‌ನಲ್ಲಿ ಮುಖ್ಯ ಸ್ತ್ರೀ ವೇಷದಾರಿ ಹೆಸರು ನನ್ನದಾಗಿರಬೇಕು. ದಿನಕ್ಕೆ ನೂರು ರೂಪಾಯಿಗಿಂತ ಹೆಚ್ಚಿಗೆ ಸಂಬಳ ಪಡೆಯಬೇಕು ಎಂಬ ಕನಸನ್ನು ಕಂಡೆ.
ಕೆರೆಮನೆ ಮೇಳದಲ್ಲಿ ನನಗೆ ಉತ್ತಮ ಅವಕಾಶಗಳು ಸಿಕ್ಕವು. ಗಜಾನನ ಹೆಗಡೆ, ಶಂಭು ಹೆಗಡೆ, ಮಹಾಬಲ ಹೆಗಡೆ ಯಕ್ಷಗಾನದ ಸೂಕ್ಷ್ಮಗಳನ್ನು ತಿಳಿಸಿ ಕೊಟ್ಟರು. ಒಂದು ವರ್ಷ ಅಲ್ಲಿದ್ದೆ. ಮರುವರ್ಷ ಉಡುಪಿ ಯಕ್ಷಗಾನ ಕೇಂದ್ರದ ತಿರುಗಾಟ ತಂಡವಾದ `ಯಕ್ಷರಂಗ'ಕ್ಕೆ ಸೇರಿದೆ. ಅದು ಶಿವರಾಂ ಕಾರಂತರ ಗರಡಿ. ಅಲ್ಲಿ ಕೇವಲ ಯಕ್ಷಗಾನ ಸಂಗೀತದಲ್ಲಿ ಮಾತ್ರ ಪ್ರಸಂಗ ನಡೆಯುತ್ತಿತ್ತು. ಅಭಿನಯ ಪ್ರಧಾನ. ಸಂಭಾಷಣೆ ಇರಲಿಲ್ಲ. ಅದು ಸ್ತ್ರೀ ಪಾತ್ರದ ಸಂವೇದನೆ ಅರ್ಥಮಾಡಿಕೊಳ್ಳಲು ಸಹಕಾರಿಯಾಯಿತು. ಯಕ್ಷರಂಗದಲ್ಲಿ ಮುಖ್ಯ ಸ್ತ್ರೀ ಪಾತ್ರ ನನಗೇ ಸಿಗುತ್ತಿತ್ತು. ದಮಯಂತಿ, ಚಿತ್ರಾಂಗದೆ, ಅಂಬೆ ಪಾತ್ರಗಳನ್ನು ಮಾಡಿದೆ. ಕಾರಂತರ ಜೊತೆ ಹಂಗೇರಿ, ಲಂಡನ್‌, ರಷ್ಯಾ, ಜಪಾನ್‌ ಮುಂತಾದ ದೇಶ ಸುತ್ತಾಡಿ ಬಂದೆ.
ಯಕ್ಷರಂಗದಲ್ಲಿ ನಾವು ಸಿಮೀತ ಪಾತ್ರಗಳಿಗೆ ಒಗ್ಗಬೇಕಾಯಿತು. ಆದರೂ 6 ವರ್ಷ ಅಲ್ಲಯೇ ಕೆಲಸ ಮಾಡಿದೆ. ನಂತರ ಸಾಲಿಗ್ರಾಮ ಮೇಳ. ಅಲ್ಲಿ ನನಗೆ ಹೆಸರು ಬಂತು. ಅಮೃತೇಶ್ವರಿ, ಪೆರ್ಡೂರು ಮೇಳದಲ್ಲಿ ಪಾತ್ರ ನಿರ್ವಹಿಸಿದೆ. ಆಗ ಚಿಟ್ಟಾಣಿ, ಶಿರಿಯಾರ ಮಂಜು ನಾಯ್ಕ, ಕಾಳಿಂಗ ನಾವುಡ, ಧಾರೇಶ್ವರ ಎಲ್ಲರ ಸಹಕಾರ ಮತ್ತು ಮಾರ್ಗದರ್ಶನ ದೊರೆಯಿತು. ಹ್ಯಾಂಡ್‌ಬಿಲ್‌ನಲ್ಲಿ ಮೊದಲ ಪಂಕ್ತಿಯಲ್ಲಿ ಹೆಸರೂ ಬಂತು, ಸಂಬಳವೂ ಜಾಸ್ತಿಯಾಯಿತು. ಒಂದು ಹಂತದ ಕನಸು ನನಸಾಯಿತು.
ನಂತರ ಸುರುವಾದದ್ದು ಮೇಳ ಕಟ್ಟುವ ಕನಸು. ಅದಕ್ಕೂ ಒಂದುದಿನ ಯೋಗ ಕೂಡಿ ಬಂತು. ಭುವನಗಿರಿ ಮೇಳ ಪ್ರಾರಂಭ ಮಾಡಿದೆ. ಮಹಾಬಲ ಹೆಗಡೆ, ಕಣ್ಣಿಮನೆ ಮುಂತಾದ ಖ್ಯಾತ ಕಲಾವಿದರಿದ್ದರು. ಮೂರೇ ವರ್ಷದಲ್ಲಿ ಐದು ಲಕ್ಷರೂಪಾಯಿ ಸಾಲಗಾರನಾದೆ. ಮೇಳ ನಿಂತಿತು. ಸಾಲ ತೀರಿಸಲಿಕ್ಕೆ ಮತ್ತೆ ಪೆರ್ಡೂರು ಮೇಳ ಸೇರಿದೆ.
ನನ್ನ ದುರಾದೃಷ್ಟ ನೋಡಿ, ಯಕ್ಷಗಾನಕ್ಕೆ ಹೊರಟಿದ್ದ ನಾನು ಅಪಘಾತಕ್ಕೆ ಒಳಗಾದೆ. ಎರಡು ವರ್ಷ ಸಂಪೂರ್ಣ ಮನೆಯಲ್ಲೇ ಇರಬೇಕಾಯಿತು. ನಂತರ ಅಭಿಮಾನಿಗಳ ಒತ್ತಾಯದಿಂದ ಕುಂಟು ಕಾಲಲ್ಲೇ ವೇಷ ಮಾಡಲು ಪ್ರಾರಂಭಿಸಿದೆ. ನಾನು ಅಪಘಾತ ಪರಿಹಾರಕ್ಕಾಗಿ ಕೋರ್ಟ್‌ ಮೊರೆ ಹೋದೆ. ಅವರು ನೀನು ಕಲಾವಿದ ಎನ್ನುವುದನ್ನು ಸಾಬೀತುಪಡಿಸು ಎಂದರು. ಸರಿಯಾದ ದಾಖಲೆ ನನ್ನಹತ್ತಿರ ಇರಲಿಲ್ಲ. ಅಂದೇ ನಾನೊಂದು ತಿರ್ಮಾನಕ್ಕೆ ಬಂದೆ. ಅದೆಷ್ಟೋ ಕಲಾವಿದರ ಪರಿಚಯ ಜಗತ್ತಿಗೆ ಇಲ್ಲ. ಅಂತಹ ಕಲಾವಿದರ ಬಗ್ಗೆ ಮಾಹಿತಿಯಿರುವ ಪುಸ್ತಕ ಬರೆಯಬೇಕೆಂದು.
ಈಗ ಆ ಕನಸನ್ನು ಸಾಕಾರ ಮಾಡುವ ಯತ್ನದಲ್ಲಿದ್ದೇನೆ.

ನಿರೂಪಣೆ: ನಾಗರಾಜ ಮತ್ತಿಗಾರ

Saturday, July 4, 2009

ಅಭಿಜಾತ ಕಲಾವಿದ ಹಡಿನಬಾಳು


ವಿಭಿನ್ನತೆಯಿಂದ ತನ್ನೆಡೆಗೆ ಸೆಳೆದುಕೊಳ್ಳುವ ಆಯಸ್ಕಾಂತೀಯ ಗುಣವುಳ್ಳ ಕಲೆ ಯಕ್ಷಗಾನ. ಇಲ್ಲಿ ಪ್ರಬುದ್ಧ ಎಂದು ಕರೆಯಬಹುದಾದ ಕಲಾವಿದರ ಸಂಖ್ಯೆ ಬಹಳಷ್ಟಿಲ್ಲ. ಎಲ್ಲಾ ರೀತಿಯ ಪಾತ್ರಗಳನ್ನು ಮಾಡುವವರಂತೂ ಅಪರೂಪ. ಪುಂಡು ವೇಷ ಮಾಡುವವನಿಗೆ ಕಿರೀಟ ವೇಷ ಒಪ್ಪುವುದಿಲ್ಲ. ಖಳ ಪಾತ್ರ ಮಾಡಿದರೆ ಪಾತ್ರ ಬೀಳಾಗುತ್ತದೆ. ಹಾಸ್ಯ ಪಾತ್ರದ ನಿರ್ವಹಣೆ ಕಷ್ಟ. ಇನ್ನು ಎಲ್ಲ ಪಾತ್ರಕ್ಕೂ ಸೈ ಎಂದರೆ ಮುಖವರ್ಣಿಕೆ ಸರಿ ಇರುವುದಿಲ್ಲ. ಅದು ಓಕೆಯಾದರೆ ಪಾತ್ರಕ್ಕೆ ಬೇಕಾದ ಮಾತುಗಾರಿಕೆ ಬರುವುದಿಲ್ಲ. ಹೀಗಾಗಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಕಲಾವಿದರು ಹೆಚ್ಚು ಇಷ್ಟವಾಗುತ್ತಾರೆ. ಅಂಥವರ ಸಾಲಿಗೆ ಸೇರಿದವರು ಹಡಿನಬಾಳು ಶ್ರೀಪಾದ ಹೆಗಡೆ.
ಉತ್ತರಕನ್ನಡ ಹೊನ್ನಾವರ ತಾಲೂಕಿನ ಮಾಳಕೋಡಿನ ಗಣೇಶ ಹೆಗಡೆ ಮತ್ತು ಮಹಾಲಕ್ಷ್ಮೀ ಅವರ ಮಗ ಶ್ರೀಪಾದ ಹೆಗಡೆ ಅವರಿಗೆ ಚಿಕ್ಕಂದಿನಿಂದಲೇ ಕಲೆಗಳಲ್ಲಿ ಆಸಕ್ತಿ. ಯಕ್ಷಗಾನ ಅಷ್ಟೇ ಅಲ್ಲ, ಮಣ್ಣಿನ ಮೂರ್ತಿ ಮಾಡುವುದರಲ್ಲೂ ಆಸಕ್ತಿ. ಬಡ ಕುಟುಂಬದಲ್ಲಿ ಹುಟ್ಟಿದ್ದರಿಂದ ಅವರ ವಿದ್ಯಾಭ್ಯಾಸ ಹತ್ತನೇ ತರಗತಿಗೆ ಸಿಮೀತವಾಯಿತು. ಕೆಲಸಕ್ಕಾಗಿ ಅಲೆದಾಡಿದರೂ ಪ್ರಯೋಜನವಾಗಲಿಲ್ಲ. ಜೀವನ ಸಾಗಿಸಲು ಕೆಲಸ ಅನಿವಾರ್ಯವಾಗಿತ್ತು. ಆಗ ಇವರನ್ನು ಕೈಬೀಸಿ ಕರೆದಿದ್ದು ಚಿಕ್ಕಂದಿನ ಆಸಕ್ತಿಯ ಯಕ್ಷಗಾನ. ತಮ್ಮ ಮಾವ ಹಾಗೂ ಯಕ್ಷಗಾನ ಕಲಾವಿದ ಸತ್ಯ ಹೆಗಡೆ ಅವರಿಂದ ಸ್ಪೂರ್ತಿಗೊಂಡ ಇವರು ಗುಂಡಬಾಳ ಮೇಳಕ್ಕೆ ಸೇರಿದರು.
ಶ್ರೀಪಾದ ಹೆಗಡೆ ಯಕ್ಷರಂಗಕ್ಕೆ ಬಂದಿದ್ದು ಹಾಸ್ಯ ಕಲಾವಿದನಾಗಿ. ನಂತರ ಯಕ್ಷಗಾನದ ಶ್ರೇಷ್ಠ ಕಲಾವಿದ ಮಹಾಬಲ ಹೆಗಡೆ ಅವರ ಒಡನಾಟ ಪ್ರಾರಂಭವಾಯಿತು. ಗಂಭೀರ ಪಾತ್ರದೆಡೆಗೆ ವಾಲಿದರು. ಪಾತ್ರಗಳಿಗೆ ತಮ್ಮದೇ ಶೈಲಿಯಲ್ಲಿ ಜೀವ ತುಂಬತೊಡಗಿದರು.
ಶ್ರೀಪಾದ ಹೆಗಡೆ ಅವರು ಕೀಚಕ ವಧೆಯ `ವಲಲ', ಗದಾಯುದ್ಧದ 'ಭೀಮ' ರುದ್ರಕೋಪದ `ರಕ್ತಜಂಘ', ಲಂಕಾದಹನದ `ಹನುಮಂತ', ಕನಕಾಂಗಿ ಕಲ್ಯಾಣದ `ಘಟೋದ್ಗಜ' ಇವಲ್ಲದೇ ಕಾಳಿದಾಸ, ರಾಮ, ಕೌರವ, ರಾವಣ ಮುಂತಾದ ಪಾತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. `ಗೋವಿಂದನ ರಾಜಿ ಪಂಚಾಯ್ತಿ' ಎನ್ನುವ ಪ್ರಸಂಗವನ್ನು ಹವ್ಯಕ ಭಾಷೆಯಲ್ಲಿ ಮಾಡಿದ ಹೆಗ್ಗಳಿಕೆ ಇವರದ್ದು.
ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಿದ ಇವರು ಗುಂಡಬಾಳ, ಇಡಗುಂಜಿ, ಪಂಚಲಿಂಗ, ಪೆರ್ಡೂರು, ಬಚ್ಚಗಾರು, ಕುಮಟಾ, ಮಂದರ್ತಿ, ಶಿರಸಿ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ಮಾಡಿದ್ದಾರೆ. ಹಲವಾರು ವೀಡಿಯೋ ಯಕ್ಷಗಾನದಲ್ಲಿ ಇವರು ಭಾಗವಹಿಸಿದ್ದಾರೆ. ತಮ್ಮದೇ ಆದ ಅಭಿಮಾನಿಗಳನ್ನು ಇವರು ಹೊಂದಿದ್ದಾರೆ.
ಯಕ್ಷಗಾನ ಮೇಳದ ತಿರುಗಾಟ ಆರು ತಿಂಗಳು ಮಾತ್ರ. ಉಳಿದ ದಿನಗಳಲ್ಲಿ ಹಲವಾರು ಕಡೆ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದಾರೆ. ಆದರೆ ಅದರಿಂದ ಜೀವನ ನಿರ್ವಹಣೆ ಕಷ್ಟ. ಅದಕ್ಕಾಗಿ ಅವರು ಚೌತಿಯ ಸಮಯದಲ್ಲಿ ಗಣಪತಿ ಮೂರ್ತಿ ನಿರ್ಮಾಣ, ಮಳೆಗಾಲದಲ್ಲಿ ಕೊಡೆ ರಿಪೇರಿ, ಹೊಲಿಗೆ, ಎಲೆ ವ್ಯಾಪಾರ ಇತ್ಯಾದಿ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನೂ ಜನತಾಮನೆಯಲ್ಲಿಯೇ ವಾಸಿಸುತ್ತಿರುವ ಇಂಥ ಅನುಭವಿ ಕಲಾವಿದನ ಈ ಸ್ಥಿತಿ ನಾಗರಿಕ ಸಮಾಜಕ್ಕೆ ಗೌರವ ತರುವಂಥದ್ದಲ್ಲ.

Tuesday, June 23, 2009

`ವಿಶೇಷ ಸಮರಂಗ`




ಹೊಸ ಪ್ರಸಂಗಗಳ ಅಬ್ಬರದಲ್ಲಿ ಪೌರಾಣಿಕ ಪ್ರಸಂಗಗಳು ಹೊಸ ವೀಕ್ಷಕರನ್ನು ಕಳೆದುಕೊಳ್ಳುತ್ತಿವೆ. ಹಾಗೆಂದು ಪೌರಾಣಿಕ ಪ್ರದರ್ಶನಗಳು ಕಡಿಮೆಯಾಗಿವೆ ಎಂದರ್ಥವಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ಪೌರಾಣಿಕ ಪ್ರಸಂಗಳು ಪ್ರದರ್ಶನಗೊಳ್ಳುತ್ತಿವೆ. ಇದೊಂದು ಆರೋಗ್ಯಕರ ಬೆಳವಣಿಗೆ. ಪೌರಾಣಿಕ ಕಥಾನಕಗಳಲ್ಲೂ ಹೊಸತನ ಕಾಣಬಹುದು. ಹೆಚ್ಚಿನ ಪ್ರಯೋಗಗಳ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನ ಕಂಡ `ವಿಷಮ ಸಮರಂಗ' ಪ್ರಸಂಗ.
ಇದು ಕೃಷ್ಣನ ಜನ್ಮದಿಂದ ನಿರ್ಯಾಣದವರೆಗಿನ ಕಥಾನಕಗಳ ಗುಚ್ಛ. ಕೃಷ್ಣನ ಲೀಲೆ, ಕಂಸವಧೆ, ಪಾಂಚಜನ್ಯ ಮೋಕ್ಷ, ಬಲರಾಮ ರೇವತಿ ವಿವಾಹ, ಶ್ರೀಕೃಷ್ಣ ಪರಂಧಾಮದವರೆಗಿನ ಕತೆಗಳ ಸಂಯೋಜನೆ ಈ `ವಿಷಮ ಸಮರಂಗ'.
ಪ್ರಸಂಗದ `ಕಂಸವಧೆ' ಆಖ್ಯಾನದಲ್ಲಿ ಕಂಸನಾಗಿ ಹುಡುಗೋಡು ಚಂದ್ರಹಾಸ, ಕೃಷ್ಣನಾಗಿ ಕಣ್ಣಿಮನೆ ಗಣಪತಿ ಭಟ್ಟ ಮತ್ತು ಬಲರಾಮನಾಗಿ ನರಸಿಂಹ ಗಾಂವಕರ್‌ ಕಾಣಿಸಿಕೊಂಡಿದ್ದರು. ಕಣ್ಣಿಮನೆ ತಮ್ಮ ಕುಣಿತಕ್ಕೆ ಇನ್ನಷ್ಟು ಹೊಸತನ್ನು ಕೊಟ್ಟರು. `ಮರೆತು ನಿಲುವುದೇಕೆ ಮಾವ ಅಳಿಯನಲ್ಲವೇ' ಎನ್ನುವ ಪದ್ಯಕ್ಕೆ ಅವರ ಅಭಿನಯ ಅದ್ಭುತ. ಕುಣಿತದಲ್ಲಿ ಅವರದು ಬಹುಬಗೆ. ಕೆಲವು ಕಡೆ ಕುಣಿತ ಹೆಚ್ಚೆನಿಸಿದರೂ ಪುಂಡ ಕೃಷ್ಣನಿಗೆ ಅದು ಓಕೆ. ಆದರೆ ಬಲರಾಮನ ಪಾತ್ರದಾರಿ ಗಾಂವಕರ್‌ ಅವರ ಕುಣಿತ ಸ್ವಲ್ಪ ಹೆಚ್ಚಾಯಿತು ಎಂದು ಅನಿಸಿದರೆ ತಪ್ಪಲ್ಲ. ಅಕ್ರೂರನಾಗಿ ಆಲ್ಮನೆ ಪದ್ಮನಾಭ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. `ಉರಿಯುವುದೊಂದೆ ದೀಪವು ಎರಡಾಗುತ್ತಿದೆ' ಮತ್ತು `ನೆತ್ತಿಗೆ ತೈಲವ ಒತ್ತುತ' ಪದ್ಯಕ್ಕೆ ಪ್ರೇಕ್ಷಕರ ನಿರೀಕ್ಷೆಯ ಅಭಿನಯ ನೀಡುವಲ್ಲಿ ಕಂಸ ಸಫಲನಾಗಲಿಲ್ಲ. ಆದರೆ ಉಳಿದ ಭಾಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿ ನೃತ್ಯ, ಅಭಿನಯ, ಸಂಭಾಷಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಾಡಿ ಜಯರಾಂ ಶೆಟ್ಟರ `ರಜಕ' ನಿಜಕ್ಕೂ ರಂಜಕನಾಗಿದ್ದ. ಎಲ್ಲಿಯೂ ಯಕ್ಷಗಾನ ಚೌಕಟ್ಟನ್ನು ಮೀರದ ಶ್ರೇಷ್ಠ ಹಾಸ್ಯ, ಅನುಭವದ ಅಭಿನಯ ಅವರದಾಗಿತ್ತು.
ಪ್ರಸಂಗದ ಎರಡನೇ ಭಾಗವಾದ `ಪಾಂಚಜನ್ಯ ಮೋಕ್ಷ'ದಲ್ಲಿ ಕೃಷ್ಣನ ಗುರುವಾದ ಸಾಂದೀಪ ಋಷಿ ಕತೆ ಬರುತ್ತದೆ. ಇದರಲ್ಲಿ ಕೃಷ್ಣನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಇಷ್ಟವಾದರು. ಕೃಷ್ಣ ಮತ್ತು ಪಾಂಚಜನ್ಯ ರಾಕ್ಷಸನ ನಡುವಿನ ಸಂಭಾಷಣೆ ಭಾಗ ಅಪರೂಪವಾಗಿತ್ತು. ಮತ್ಯುಕನ್ನೆಯ ಮಗಳಾದ `ಅತಿಕೆ'ಯಾಗಿ ಶಿವಕುಮಾರ್‌ ಬೇಗಾರ್‌ ಅವರ ನಿರ್ವಹಣೆ ಉತ್ತಮ.`ಸ್ತ್ರೀಯರು ಯುದ್ಧಕ್ಕೆ ಯೋಗ್ಯರಲ್ಲ ಮನೆ ಕೆಲಸ ಮಾತ್ರಕ್ಕೆ ಯೋಗ್ಯ' ಎಂದು ಅಪಹಾಸ್ಯ ಮಾಡುವ `ತರುಣಿಯರ ಅಗ್ಗಳಿಕೆ' ಎನ್ನುವ ಪದ್ಯಕ್ಕೆ ಕೊಂಡದಕುಳಿ ಅವರು ಶ್ರೇಷ್ಠ ಅಭಿನಯ ನೀಡಿದರು.
ಪ್ರಸಂಗದ ಮೂರನೇ ಭಾಗವಾಗಿ `ಬಲರಾಮ ವಿವಾಹ' ಮತ್ತು `ಶ್ರೀಕೃಷ್ಣ ಪರಂಧಾಮ' ಕಥಾನಕದಲ್ಲಿ ಬಲರಾಮನಾಗಿ ಬಳ್ಕೂರು ಕೃಷ್ಣಯಾಜಿ ರಂಗದಲ್ಲಿ ಮಿಂಚಿನ ಸಂಚಲನ ಮೂಡಿಸುವಲ್ಲಿ ಸಫಲರಾದರು. ರೇವತಿ ಮತ್ತು ಬಲರಾಮ ಸಂಭಾಷಣೆ ರಂಜನೀಯವಾಗಿತ್ತು. ಬೆಳಗಿನ ಜಾವಕ್ಕೆ ಈ ಭಾಗ ಬಂದಿದ್ದರಿಂದ ನಿದ್ದೆಯ ಮಂಪರಿನಿಂದ ಪ್ರೇಕ್ಷಕರು ಸಂಪೂರ್ಣ ಎಚ್ಚರಗೊಳ್ಳುವಂತಾಯಿತು.
ಸ್ತ್ರೀ ಪಾತ್ರದಲ್ಲಿ ಹೆಚ್ಚಿನ ಅನುಭವವಿರುವ ಶಶಿಕಾಂತ ಶೆಟ್ಟಿ ಅವರು ಅಂದು ಶ್ರೀಕೃಷ್ಣನ ಪಾತ್ರ ನಿರ್ವಹಿಸಿದರು. ಪರಂಧಾಮ ಗೈಯುವ ಭಾಗದ ಸಂಭಾಷಣೆ ಭಾವನಾತ್ಮಕವಾಗಿತ್ತು.
ಭಾಗವತರಾಗಿ ರವಿ ಸುರಾಲ್‌, ರಾಘವೇಂದ್ರ ಮಯ್ಯ ಮತ್ತು ಹೆರಂಜಾಲು ಗೋಪಾಲ ಗಾಣಿಗ ಅವರು ಉತ್ತಮವಾಗಿ ಹಾಗೂ ಸಾಹಿತ್ಯ ಸ್ಪಷ್ಟವಾಗಿ ಹಾಡಿದರು. ಹಿಮ್ಮೇಳ ಕಲಾವಿದರಿಗೆ ಪೂರಕವಾಗಿತ್ತು. ಶಿವಾನಂದ ಕೋಟ ಅವರು ನಾಲ್ಕು ಚೆಂಡೆಯನ್ನು ಏಕಕಾಲಕ್ಕೆ ನುಡಿಸಿ ರಂಜಿಸಿದರು.
ಅವಿಭಜಿತ ದಕ್ಷಿಣ ಕನ್ನಡ ವಕೀಲರ ಸಂಘದವರು ಈ ಯಕ್ಷಗಾವನ್ನು ಆಯೋಜಿಸಿದ್ದರು. ಇಂತಹ ಅಪರೂಪದ ಪೌರಾಣಿಕ ಪ್ರಸಂಗ ಯಕ್ಷಪ್ರಿಯರಿಗೆ ನೀಡಿದ ವಕೀಲರ ಸಂಘದವರು ಅಭಿನಂದನಾರ್ಹರು.

Friday, June 19, 2009

ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ


ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ ಕೆಸರಕೊಪ್ಪದ ವಿಘ್ನೇಶ್ವರ ಗೌಡ ಅವರಿಗೆ ಇತ್ತೀಚೆಗೆ ಹಾರ್ಸಿಕಟ್ಟಾದಲ್ಲಿ ಯಕ್ಷಗಾನ ಕಲಾವಿದ ಡಿ.ಜಿ.ಹೆಗಡೆ ಮತ್ತಿಗಾರ ನೆನಪಿನ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ನಿಮಿತ್ತ ಎಲೆಮರೆಯ ಕಾಯಿಯಾಗಿಯೇ ಇದ್ದ ಚಂಡೆ ವಾದಕರ ಪರಿಚಯ ಮಾಡುವ ಬರಹ ಇದು.
ಇಂದಿಗೂ ಬಹುಪಾಲು ಜನರಿಗೆ ಯಕ್ಷಗಾನ ಎಂದಾಕ್ಷಣ ನೆನಪಾಗುವದು ಚಂಡೆ. ಚಂಡೆಯ ಸದ್ದು ಕೇಳಿದೊಡನೇ ಯಕ್ಷಗಾನ ನೋಡಿ ಬರೋಣ ಎನಿಸುತ್ತದೆ. ಇಂಥ ಮಾದಕ ಆಕರ್ಷಣೆಯ ಚಂಡೆಯ ವಾದಕ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ, ಅದರಾಚೆ ಕೂಡ ಪ್ರಸಿದ್ಧಿ ಪಡೆದು ಮನೆ ಮಾತಾದವರು ವಿಘ್ನೇಶ್ವರ ಗೌಡ ಕೆಸರಕೊಪ್ಪ. ಓದಿದ್ದು ನಾಲ್ಕನೇ ಈಯತ್ತೆಯಾದರೂ ಚಂಡೆ ವಾದನದ ಗುಂಗಿನಲ್ಲಿ ಚಂಡೆ ಕಲಿತು ಇಂದು ಚಂಡೆ ವಾದನದಲ್ಲಿ ಹೆಸರುಗಳಿಸಿಕೊಂಡಿದ್ದಾರೆ, ಗಳಿಸಿದ ಹೆಸರನ್ನು ಉಳಿಸಿಕೊಂಡಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಕಾನಗೋಡ ಸಮೀಪದ ಕೆರಸಕೊಪ್ಪದ ಊರಿನ ವಿಘ್ನೇಶ್ವರ ಬದುಕಿಗೆ ವಾಹನವನ್ನು ಬಾಡಿಗೆಗೆ ಓಡಿಸುತ್ತಾರೆ. ಅದರ ಮಧ್ಯೆ, ಕೆಲವೊಮ್ಮೆ ಬಂದ ಬಾಡಿಗೆಯನ್ನೂ ಬಿಟ್ಟು ಯಕ್ಷಗಾನಕ್ಕೆ ಹೋಗುತ್ತಾರೆ. ಇಂಥ ಅಪ್ಪಟ ಕಲಾ ಸೇವಕ ದ್ಯಾವ ಗೌಡ ಮತ್ತು ನಾಗವೇಣಿ ಅವರ ನಾಲ್ಕನೇ ಮಗ. ನಾಲ್ಕನೇ ತರಗತಿಗೆ ಗೋಲಿ ಹೊಡೆದು ಶಂಕರ ಭಾಗವತ ಗಿರಿಗಡ್ಡೆ ಅವರ ಮಾರ್ಗದರ್ಶನದಲ್ಲಿ ಶಂಕರ ಭಾಗವತ ಯಲ್ಲಾಪುರ ಅವರಲ್ಲಿ ಚಂಡೆ ವಾದನದ ಗತ್ತನ್ನು ಕಲಿತರು. ಪ್ರಾರಂಭದಲ್ಲಿ ಬಾಲ ವೇಷಗಳ್ನೂ ಹಾಕಿದ ವಿಘ್ನೇಶ್ವರ ಗೌಡ, ತಮ್ಮ ಇಪ್ಪತ್ತನೇ ವರ್ಷದಿಂದಲೇ ಚಂಡೆಯ ಮೂಲಕ ಯಕ್ಷಗಾನ ಕಲಾವಿದರನ್ನು ಕುಣಿಸಲು ಪ್ರಾರಂಭಿಸಿದರು. ಪಂಚಲಿಂಗೇಶ್ವರ, ವೀರಾಂಜನೇಯ ಹಾಗೂ ಕೆರೆಮನೆ ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಕೂಡ ಹಿಮ್ಮೇಳದಲ್ಲಿ ಚಂಡೆ ವಾದನ ಮಾಡಿದ ಗೌಡ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ಭಟ್ಟ, ಗಣಪತಿ ಹೆಗಡೆ ಸೇರಿದಂತೆ ಪ್ರಮುಖ ಕಲಾವಿದರೂ ಇವರ ಚಂಡೆಗೆ ಹೆಜ್ಜೆ ಹಾಕಿದ್ದಾರೆ. ನೆಬ್ಬೂರು ನಾರಾಯಣ ಭಾಗವತ್‌, ಕೇಶವ ಹೆಗಡೆ, ಸುಬ್ರಹ್ಮಣ ಧಾರೇಶ್ವರ ಸೇರಿದಂತೆ ಪ್ರಮುಖ ಭಾಗವತರ ಹಾಡುಗಾರಿಕೆಗೂ ಸಾತ್‌ ನೀಡಿದ್ದಾರೆ. ಈಗಗಾಲೇ ಐದು ಸಾವಿರಕ್ಕೂ ಅಧಿಕ ಯಕ್ಷಗಾನಗಳಲ್ಲಿ ಚಂಡೆ ವಾದನ ಮಾಡಿದ್ದಾರೆ ಇವರು. ಇವರ ಚಂಡೆಯಲ್ಲಿ ಲಯ ಬದ್ಧತೆ, ಸ್ಪಷ್ಟತೆ, ವೇಗ ಇರುವ ಕಾರಣ ವಿಘ್ನೇಶ್ವರ ಗೌಡ ಅವರ ಚಂಡೆ ಎಂದರೆ ಯಕ್ಷಗಾನ ನೋಡಲು ಬರುವ ಪ್ಷೇಕ್ಷಕರ ಸಂಖ್ಯೆ ಕೂಡ ವೃದ್ಧಿಸುತ್ತಿದೆ. ಬೆಂಗಳೂರು, ಮಂಗಳೂರು, ಉಡುಪಿ, ದೆಹಲಿ, ಬಾಂಬೆ ಸೇರಿದಂತೆ ವಿವಿಧಡೆ ತಮ್ಮ ಕಲಾ ಸೇವೆ ನೀಡಿರುವ ಇವರನ್ನು ಮಂಗಳವಾರ ಜೂ.16ರ ಸಂಜೆ ಹಾರ್ಸಿಕಟ್ಟಾದ ದಿವಾನ್‌ ಯಕ್ಷ ಸಮೂಹ ಗೌರವಿಸಲಿದೆ. ಸಾರ್ಥಕ ಸೇವೆಗೆ ಸಂದ ಗೌರವ ಇದಾಗಿದೆ. ಎಲೆಮರೆಯಾಗಿಯೇ ಇದ್ದ ಗೌಡರನ್ನು ಗೌರವಿಸುವ ಮೂಲಕ ಯಕ್ಷ ಸಮೂಹ ಕೂಡ ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿದೆ.
ರಾಘವೇಂದ್ರ ಬೆಟ್ಟಕೊಪ್ಪ
( udayavani dina patrike krape)

Tuesday, June 2, 2009

ಶಾಲೆಯಲ್ಲಿ ಯಕ್ಷಗಾನವೂ ಪಠ್ಯವಾಗಬೇಕು


ಹೆಸರು: ಹೊಸ್ತೋಟ ಮಂಜುನಾಥ ಭಾಗವತ
ಪ್ರಸಿದ್ಧ ಯಕ್ಷಋಷಿ, ಗುರು, ಪ್ರಸಂಗಕರ್ತ
ಜನ್ಮ ದಿನಾಂಕ: 15-2- 1940
ತಂದೆ, ತಾಯಿ: ಗಣಪತಿ ಭಟ್ಟ, ಮಹಾದೇವಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಹನುಮಂತಿ ಗ್ರಾಮದ ಹೊಸ್ತೋಟ ಎನ್ನುವ ಸಣ್ಣ ಹಳ್ಳಿಯಲ್ಲಿ ಜನಿಸಿದವನು ನಾನು. ಬಡ ಕುಟುಂಬ ನಮ್ಮದು. ನನ್ನ ಅಪ್ಪನಿಗೆ ನಾವು ಐದು ಮಂದಿ ಮಕ್ಕಳು. ನಾನು ಗಂಡು ಮಕ್ಕಳಲ್ಲಿ ಹಿರಿಯವ.
ನಮ್ಮ ಕುಟುಂಬಕ್ಕೂ ಯಕ್ಷಗಾನಕ್ಕೂ ಸಂಬಂಧ ಯಾವಾಗಲೂ ಇದೆ. ನಮ್ಮ ಮನೆಗೆ ಕಲಾವಿದರು ಬರುವುದು, ಹೋಗುವುದು ರೂಢಿಯಲ್ಲಿತ್ತು. ಹಾಗಾಗಿ ನಾನು ಸಣ್ಣವನಿರುವಾಗಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು. ಆವಾಗಲಿಂದಲೂ ನಾನು ಕೆರೆಮನೆ ಶಿವರಾಮ ಹೆಗಡೆ ಅವರ ಅಭಿಮಾನಿ. ಯಕ್ಷಗಾನದ ಚಟವನ್ನು ಅಂಟಿಸಿಕೊಂಡ ನಾನು ಶಾಲೆ ಕಲಿತದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ನನ್ನ ಮೂವತ್ತನೇ ವರ್ಷದವರೆಗೂ ನಾನು ಹೀಗೆ ಆಗಬೇಕು, ಇದನ್ನೇ ಮಾಡಬೇಕು ಎಂದು ಕನಸು ಕಂಡವನಲ್ಲ. ಒಬ್ಬ ೃಹ್ಮಚಾರಿಯಾಗಿಯೇ ಕಾಲನ ಜೊತೆ ಹೊಂದಿಕೊಳ್ಳುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.
ಯಕ್ಷಗಾನವನ್ನು ಕಲಿತ ನಾನು ಮೇಳ ಗೀಳ ಸೇರದೆ ಮನೆಯಲ್ಲೇ ಕೆಲಸ ಮಾಡುತ್ತಾ ಇದ್ದೆ. ಮನೆಯಲ್ಲಿ ಮದುವೆಯಾಗು ಎನ್ನುವ ಒತ್ತಾಯವು ಪ್ರಾರಂಭವಾಯಿತು. ಸರಿ, ಮದುವೆಯಾಗೋಣ ಎಂದು ಮನಸ್ಸು ಮಾಡಿದರೆ ಬಂದ ಸಂಬಂಧವೆಲ್ಲ ಮನೆ ಅಳಿಯ ಆಗುವ ಸಂಬಂಧಗಳೇ. ಮೊದಲು ನಾನು ಸ್ವಂತ ಜಮೀನು ಮಾಡಿಕೊಳ್ಳಬೇಕು. ನಂತರ ಮದುವೆಯ ವಿಚಾರ ಎಂಬ ತಿರ್ಮಾನಕ್ಕೆ ಬಂದೆ.
ಬೇಡ್ತಿ ನದಿಯ ಪ್ರದೇಶದಲ್ಲಿ ಪಡಬಿದ್ದ ಜಮೀನನ್ನು ಸರಿ ಮಾಡಿ, ಅಡಿಕೆ ತೋಟ ಮಾಡಿದೆ. ಇನ್ನೇನು ಫಸಲು ಬರುತ್ತದೆ ಎನ್ನುವಾಗ, ಬೇಡ್ತಿ ನದಿಗೆ ಅಣೆಕಟ್ಟು ಕಟ್ಟುತ್ತಾರೆ ಎನ್ನುವ ಗುಲ್ಲು ಬಿತ್ತು. ನಾನು ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ ಎನ್ನುವ ಬೇಸರದಿಂದ ಆ ಜಾಗವನ್ನೇ ಬಿಟ್ಟು ರಾಮಕೃಷ್ಣ ಆಶ್ರಮ ಸೇರಿ ಬಿಟ್ಟೆ. ಇದು ನನ್ನ ಜೀವನದ ಬದಲಾವಣೆಯ ಕಾಲ.
ಇಲ್ಲೊಂದು ಮಜಾ ಇದೆ. ನಾನು ಅಂದು ಮುಳುಗಡೆಯಾಗಬಹುದು ಎಂದು ಯಾವ ಜಮೀನನ್ನು ಬಿಟ್ಟು ಹೊರಟೆನೋ ಆ ಜಮೀನು ಇನ್ನೂ ಮುಳಗಡೆಯಾಗದಿರುವುದು ವಿಶೇಷ.
ಆಶ್ರಮ ಸೇರಿದ ನನಗೆ ಆಧ್ಯಾತ್ಮಿಕ ಒಲವು ಹೆಚ್ಚಾಯಿತು. ನಾನು ಸಣ್ಣವನಿರುವಾಗಿನಿಂದ ಗೀಳು ಹಚ್ಚಿಕೊಂಡಿದ್ದ ಯಕ್ಷಗಾನ ಮತ್ತೆ ಸೆಳೆಯಿತು. ಯಕ್ಷಗಾನವನ್ನೇ ನಾನು ಅಧ್ಯಾತ್ಮವಾಗಿ ತೆಗೆದುಕೊಂಡೆ. ಅದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಾಣತೊಡಗಿದೆ. ಮದುವೆ ಎನ್ನುವ ವಿಚಾರವೇ ನನಗೆ ನೆನಪಿಗೆ ಬರಲಿಲ್ಲ.
ನನ್ನ ಮೂವತ್ತನೇ ವಯಸ್ಸಿಗೆ ಆಶ್ರಮದಿಂದ ಮರಳಿದೆ. ಕೆರೆಮನೆ ಮೇಳದ ಸಂಪರ್ಕಕ್ಕೆ ಬಂದೆ. ಅಲ್ಲಿ ನನ್ನ ಇಷ್ಟದ ಕಲಾವಿದರಾದ ಶಿವರಾಮ ಹೆಗಡೆ ಅವರ ಸಖ್ಯ. ಅವರ ಹತ್ತಿರ ನಾನೊಂದು ದಿನ ಅಂದೆ `ನಿಮ್ಮ ಅಭಿಮಾನಿ, ನಿಮ್ಮ ಪಾತ್ರಗಳು ಖುಷಿಯಾಗುತ್ತದೆ' ಎಂದೆ. ಅದಕ್ಕೆ ಅವರು, `ತಮಾ, ಕಲಾವಿದನನ್ನು ಮೆಚ್ಚುವುದಕ್ಕಿಂತ, ಅವನನ್ನು ದೊಡ್ಡ ಮಾಡುವುದಕ್ಕಿಂತ ಕಲೆಯನ್ನು ಮೆಚ್ಚ ಬೇಕು. ಕಲಾವಿದನಿಗಿಂತ ಕಲೆ ದೊಡ್ಡದು' ಎಂದರು.
ನಾನು ಅಂದಿನಿಂದ ಯಕ್ಷಗಾನದ ಪ್ರತಿಯೊಂದು ಅಂಗವನ್ನು ಕಲಿಯುವ ಹಟ ತೊಟ್ಟೆ. ನನ್ನ ಜೀವನ ಎನಿದ್ದರೂ ಯಕ್ಷಗಾನ ಎನ್ನುವ ದೃಢ ನಿರ್ಧಾರಕ್ಕೆ ಬಂದೆ. ಯಕ್ಷಗಾನ ಕುಣಿತ ಕಲಿತೆ, ಕುಣಿದೆ. ನೃತ್ಯವನ್ನು ಕಲಿತವನಿಗೆ ಭಾಗವತಿಕೆ ಬಂದರೆ ಒಳ್ಳಯದಲ್ಲವೇ ಎಂದು ಅದನ್ನೂ ಕಲಿತೆ. ಇವೆರಡನ್ನೂ ಕಲಿತ ನನಗೆ ಮದ್ದಲೆ ಮತ್ತು ಚಂಡೆ ವಾದನವನ್ನು ಕಲಿತರೆ ಒಳ್ಳೆಯದು ಅನಿಸಿತು. ಕಲಿತೆ. ನಂತರ ಕೆರೆಮನೆ ಮೇಳದಲ್ಲಿ ಕಲಾವಿದನಾಗಿ ಪಾತ್ರಗಳನ್ನು ನಿರ್ವಹಿಸತೊಡಗಿದೆ.
ಕಲಾವಿದನಾಗಿದ್ದ ನನಗೆ ಯಕ್ಷಗಾನ ಕಲಿಯುವವರಿಗೆ ಏನಾದರೂ ಸುಲಭ ವಿಧಾನವನ್ನು ಅಳವಡಿಸಬೇಕು. ಅದು ಗಣಿತ ರೂಪದಲ್ಲಿರಬೇಕು. ಸುಲಭ ಮತ್ತು ಒಮ್ಮೆ ಕಲಿತರೆ ಮರೆಯದಂತಿರಬೇಕು ಎಂಬ ಸೂತ್ರ ಅಳವಡಿಸುವ ಕನಸನ್ನು ಕಂಡೆ. ಅದರ ಬಗ್ಗೆ ಅಧ್ಯಯನ ಮಾಡಿದೆ. ಬಾಳೆಹದ್ದ ಕೃಷ್ಣ ಭಾಗವತರು ಅದಕ್ಕೆ ಸಹಕಾರಿಯಾದರು. ಅಲ್ಲಿಂದ ನಾನು ನನ್ನ ಹತ್ತಿರ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಗಣಿತ ಸೂತ್ರದಲ್ಲಿಯೇ ಯಕ್ಷಗಾನವನ್ನು ಹೇಳಿ ಕೊಡತೊಡಗಿದೆ. ಈ ಗಣಿತ ಸೂತ್ರದಲ್ಲಿ ಯಕ್ಷಗಾನವನ್ನು ಸರಿಯಾಗಿ ಕಲಿತರೆ ಮತ್ತೆ ಮರೆಯುವ ಸಂಭವವಿರುವುದಿಲ್ಲ ಎನ್ನುವುದು ಗಮನಕ್ಕೆ ಬಂತು. ಲಯ ತಪ್ಪುವ ಸಂಭವವೂ ಇಲ್ಲಿರುವುದಿಲ್ಲ. ಇಂದು ನನ್ನ ಅನೇಕ ಶಿಷ್ಯರು ಅದೇ ವಿಧಾನದಲ್ಲಿ ಯಕ್ಷಗಾನವನ್ನು ಕಲಿಸಿ ಕೊಡುತ್ತಿರುವುದರಿಂದ ಆ ಕನಸು ನನಸಾಗಿದೆ.
ಯಕ್ಷಗಾನವನ್ನು ಸಾಮನ್ಯರಿಗೆ ಕಲಿಸಿ ಬಿಡಬಹುದು. ಆದರೆ ಅಂಧರಿಗೆ ಕಲಿಸಿ ಅವರ ಹತ್ತಿರ ಒಂದು ಆಖ್ಯಾನವನ್ನು ಆಡಿಸಬೇಕು ಎನ್ನುವ ಕನಸನ್ನು ಕಂಡೆ. ಸರಿ ಶಿವಮೊಗ್ಗದಲ್ಲಿರುವ ಅಂಧರ ಶಾಲೆಗೆ ಹೋಗಿ ಅವರಿಗೆ ಯಕ್ಷಗಾನವನ್ನು ಕಲಿಸಿದೆ. ಅದೊಂದು ಸವಾಲು. ಆದರೆ ನಾನು ಅಂದುಕೊಂಡದ್ದಕ್ಕಿಂತ ಬೇಗನೆ ಅವರು ಯಕ್ಷಗಾನವನ್ನು ಕಲಿತರು. ಅವರು `ಕಂಸವಧೆ' ಯಕ್ಷಗಾನವನ್ನು ಹಲವಾರು ಬಾರಿ ಪ್ರದರ್ಶಿಸಿದರು.
ನಾನು ಸದಾ ಕನಸುಗಾರ ಎನ್ನಬಹುದು. ಆದರೆ ಕನಸು ನನಸಿನ ಗುರಿ ತಲುಪಬೇಕು, ಅಲ್ಲಿಯವರೆಗೆ ನನಗೆ ಸಮಾಧಾನವಿರುವುದಿಲ್ಲ. ಈ ಕನಸಿನ ಫಲವೇ ಇಂದು ನಾನು 160 ಯಕ್ಷಗಾನ ಆಖ್ಯಾನಗಳನ್ನು ರಚಿಸಲು ಕಾರಣವಾಯಿತು. ಇದರಲ್ಲಿ ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ, ಸಂಪೂರ್ಣ ಭಾಗವತ, ಭಾಸವತಿ, ಶ್ರೀರಾಮ ನಿರ್ಯಾಣ ಜೊತೆಗೆ ಮಕ್ಕಳು ಸುಲಭವಾಗಿ ಪ್ರದರ್ಶನ ನೀಡುವಂತಹ ಹಲವಾರು ಯಕ್ಷಗಾನವನ್ನು ಬರೆದಿದ್ದೇನೆ.
ಇಂದು ವೃತ್ತಿ ಮೇಳಗಳು ಪ್ರದರ್ಶಿಸುವ ಯಕ್ಷಗಾನದಲ್ಲಾದ ಬದಲಾವಣೆ ನೋಡಿದರೆ ಭಯವಾಗುತ್ತದೆ. ಹೊಸ ಕಲಾವಿದರಿಗೆ ಪೌರಾಣಿಕ ಪ್ರಸಂಗದಲ್ಲಿ ಪಾತ್ರ ನಿರ್ವಹಿಸಿದರೆ, ಮಾತಾಡಲಿಕ್ಕೆ ಬರದೆ ಬೇಗನೆ ರಂಗದಿಂದ ನಿರ್ಗಮಿಸುವುದನ್ನು ಕಾಣಬಹುದು. ಅಧ್ಯಯನದ ಕೊರತೆ ಇಂದಿನ ಬಹುತೇಕ ಕಲಾವಿದರಿಗೆ ಇದೆ. ಒಂದು ತಿರುಗಾಟ ಮಾಡಿದಾಕ್ಷಣ ತಾನೊಬ್ಬ ಕಲಾವಿದ ಎಂದುಕೊಂಡು ಬಿಡುತ್ತಾನೆ. ಯಕ್ಷಗಾನದ ಮಟ್ಟಿಗೆ ಇದು ಒಳ್ಳೆಯ ಲಕ್ಷಣವಲ್ಲ. ಇದಕ್ಕೆ ಸಾಮಾಜಿಕ ಪ್ರಸಂಗವೇ ಕಾರಣವೇನೋ ಅನ್ನಿಸುತ್ತದೆ. ಹೊಸ ಪ್ರಸಂಗ ಎನ್ನುವುದು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ಇಂದು ಬರುತ್ತಿರುವ ಹೊಸ ಪ್ರಸಂಗಗಳಿಗೂ ಅಂದು ಬಂದ ಪ್ರಸಂಗಕ್ಕೂ ವ್ಯತ್ಯಾಸವಿದೆ. `ಬೇಡರ ಕಣ್ಣಪ್ಪ' ಪ್ರಸಂಗ ಯಕ್ಷಗಾನಕ್ಕೆ ಹೊಸತಾದರೂ ಅದರ ಪದ್ಯಗಳು ಪೌರಾಣಿಕ ಪ್ರಸಂಗದಂತಿದ್ದವು. ಅದಕ್ಕಾಗಿ ಜನರಿಗೆ ಆ ಪ್ರಸಂಗ ಹಿಡಿಸಿತು. ನಾನು ಬರೆದ `ಭಾಸವತಿ'ಯಲ್ಲಿಯೂ ಕೂಡಾ ಸಿನೆಮಾ ರಾಗದ ಪದ್ಯಗಳು ಇರಲಿಲ್ಲ. ಅದಕ್ಕಾಗಿ ಜನ ಮೆಚ್ಚಿದರು. ಹೊಸ ಪ್ರಸಂಗಗಳು ರಂಗಕ್ಕೆ ಬರಬೇಕು. ಆದರೆ ಅವು ಯಕ್ಷಗಾನದ ಆಯಾಮದಲ್ಲಿಯೇ ಇರಬೇಕು. ಛಂದಸ್ಸು ಬದಲು ಮಾಡಿ ಸಿನೆಮಾ ಧಾಟಿಯಲ್ಲಿ ಹಾಡುಗಳನ್ನು ಹೇಳಿದರೆ ಆಭಾಸವಾಗುವುದು ಗ್ಯಾರಂಟಿ.
ಮ್ಯಾಕ್‌ಬೆತ್‌!
ಷೇಕ್ಸ್‌ಪಿಯರ್‌ನ `ಮ್ಯಾಕ್‌ಬೆತ್‌' ನಾಟಕವನ್ನು ಯಕ್ಷಗಾನಕ್ಕೆ ತರಬೇಕು. ಅದನ್ನು ಯಕ್ಷಗಾನ ಶೈಲಿಯಲ್ಲಿ ಬರೆಯಬೇಕು ಎನ್ನುವ ಕನಸು ನನ್ನದಾಗಿತ್ತು. ಈಗ ಅದು ಸಾಕಾರವಾಗಿದೆ. ಮ್ಯಾಕ್‌ಬೆತ್‌ ನಾಟಕವನ್ನು ಯಕ್ಷಗಾನ ಶೈಲಿಗೆ ಬರೆದಿದ್ದೇನೆ. `ಮೇಘಕೇತ' ಈ ಪ್ರಸಂಗದ ಹೆಸರು. ವಿದೇಶಿ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ಅನಿವಾರ್ಯವಾಗಿ ಬದಲಾಯಿಸಿದ್ದೇನೆ. ಇಲ್ಲಿ ಮ್ಯಾಕ್‌ಬೆತ್‌, `ಮೇಘಕೇತ' ಆಗಿದ್ದಾನೆ. `ಲೂಯಿಸಸ್‌'ನ ಹೆಸರು `ಉಲ್ಲಾಸ' ಎಂದು ಮಾಡಿದ್ದೇನೆ. ಇದರ ರಂಗ ಪ್ರಯೋಗ ಇನ್ನೂ ಆಗಿಲ್ಲ. ಪ್ರಯೋಗ ಕಂಡು ಯಶಸ್ವಿಯಾದರೆ ನನ್ನ ಕನಸು ನನಸಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಾನು ಕಂಡ ಕನಸು ಹತ್ತರಿಂದ ಹದಿನೈದು ವರ್ಷದ ಮಕ್ಕಳು ಯಕ್ಷಗಾನವನ್ನು ಕಲಿಯಬೇಕು ಎಂದು. ಇಂದು ಹಲವಾರು ಹಳ್ಳಿಗಳಲ್ಲಿ ಮಕ್ಕಳನ್ನು ಸೇರಿಸಿ ಯಕ್ಷಗಾನ ಆಸಕ್ತರು ಮಕ್ಕಳ ಯಕ್ಷಗಾನ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ನಾನು ಎಷ್ಟೋ ಕಡೆ ನಡೆಯುತ್ತಿರುವ ಶಿಬಿರಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಅವರಿಗೆ ಯಕ್ಷಗಾನವನ್ನು ಕಲಿಸಿಕೊಡಲು ಹೋಗುತ್ತಿದ್ದೇನೆ. ಹೀಗಾಗಿ ಇದು ಬೇಸಿಗೆ ಶಿಬಿರಗಳ ಮೂಲಕ ನನಸಾಗುತ್ತಿದೆ.
ನನ್ನ ಸದ್ಯದ ಕನಸೆಂದರೆ ಬಡಗುತಿಟ್ಟು ಯಕ್ಷಗಾನವೆಂಬುದು ಎಲ್ಲಾ ಕಡೇ ಒಂದೇ ರೀತಿ ಇರಬೇಕು. ಉತ್ತರಕನ್ನಡ, ದಕ್ಷಿಣ ಕನ್ನಡ ಎನ್ನುವ ಯಕ್ಷಗಾನ ಶೈಲಿಗಳು ಹೋಗಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕು. ಆ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿಯ ಜತೆಗೂಡಿ ಯಕ್ಷಗಾನ ಕಲಿಸುವ ಶಿಕ್ಷಕರ ವರ್ಗದವರು ಪ್ರಯತ್ನ ಮಾಡಬೇಕು.
ಶಾಲೆಗಳಲ್ಲಿ ಭರತನಾಟ್ಯ, ಸಂಗೀತ ಪಠ್ಯವಾಗಿರುವಂತೆ ಯಕ್ಷಗಾನ ಯಾಕೆ ಇನ್ನೂ ಪಠ್ಯವಾಗಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಯಾಕೆಂದರೆ, ಮಾತು, ಕುಣಿತ, ಸಂಗೀತ, ವಾದನ, ಕಣ್ಮನ ಸೆಳೆಯುವ ವೇಷಭೂಷಣ ಹೊಂದಿರುವ ಜಗತ್ತಿನ ಏಕೈಕ ಶ್ರೀಮಂತ ಕಲೆ ಇದು. ಇಂತಹ ಕಲೆಯನ್ನು ಪಠ್ಯವಾಗಿ ಮಾಡಬೇಕು. ಯಕ್ಷಗಾನ ಕಲಿಸುವ ಶಿಕ್ಷಕರಿಗೆ ನೌಕರಿಯ ಭದ್ರತೆ ಇರಬೇಕು. ಇಂದು ಯಕ್ಷಗಾನ ಕಲಾವಿದ ಎಂದರೆ ಕಿರಾಣಿ ಅಂಗಡಿಯಲ್ಲೂ ಕೆಲಸ ಇಟ್ಟುಕೊಳ್ಳುವುದಿಲ್ಲ. ಇಂತಹ ಭಾವನೆ ಹೋಗಬೇಕು. ಇದು ನನ್ನ ಕನಸು. ನನಸಾಗಿಸುವ ಪ್ರಯತ್ನದಲ್ಲಿದ್ದೇನೆ.
ಯಕ್ಷಗಾನವೇ ನನ್ನ ಬದುಕು. ನನ್ನ ಕನಸುಗಳು ಯಕ್ಷಗಾನದ್ದೇ. ಬಹಳಷ್ಟು ನನಸಾಗಿವೆ. ಕನಸುಗಳು ಹುಟ್ಟುತ್ತಲೇ ಇದೆ. ಇದು ನಿರಂತರ. ಕನಸು ಸಾಧನೆಗೆ ಸಹಕಾರಿ. ನನಸಾಗಿದ್ದು ಮುಂದಿನ ಕನಸಿಗೆ ಪೂರಕ ಅಲ್ಲವೇ?


ನಿರೂಪಣೆ: ನಾಗರಾಜ ಮತ್ತಿಗಾರ

Thursday, May 21, 2009

ಹಿಂದೂಸ್ತಾನಿ ಗಾಯಕನಾಗಬೇಕಿತ್ತು...ಭಾಗವತನಾದೆ.







ಸುಬ್ರ­ಮಣ್ಯ ಧಾರೇ­ಶ್ವರ
ಯಕ್ಷ­ಗಾ­ನದ ಜನ­ಪ್ರಿಯ ಭಾಗ­ವತ



ನಾನು ಗೋಕ­ರ್ಣದ ಸಮು­ದ್ರದ ಅಂಚಿ­ನಲ್ಲಿ ಹುಟ್ಟಿ­ದವ. ನನ್ನ ಅಪ್ಪ ಲಕ್ಷ್ಮೀ­ನಾ­ರಾ­ಯಣ ಭಟ್ಟ, ಅಮ್ಮ ಲಕ್ಷ್ಮೀ. ನಾನು ಒಬ್ಬನೇ ಮಗ. ಚಿಕ್ಕಂ­ದಿ­ನಿಂ­ದಲೂ ನಾನು ಕಾಣು­ತ್ತಿ­ರುವ ಕನಸು ಒಂದೇ, ಹಿಂದೂ­ಸ್ತಾನಿ ಸಂಗೀ­ತ­ಗಾ­ರ­ನಾ­ಗ­ಬೇಕು ಎಂಬುದು.
ನನ್ನ ಚಿಕ್ಕಮ್ಮ ಸುಲೋ­ಚನಾ ಮಧ್ಯಸ್ಥ ಮತ್ತು ಮಾವ ನಾರಾ­ಯಣ ಮಧ್ಯಸ್ಥ ಸಂಗೀ­ತದ ಗುಂಗನ್ನು ಮೊದಲು ನನಗೆ ತುಂಬಿ­ದ­ವರು. `ಶರಣು ಸಿದ್ಧಿ­ವಿ­ನಾ­ಯಕ' ಮತ್ತು ಭೀಮ­ಸೇನ ಜೋಶಿ ಅವರ `ಮಾದೆ ಮಾಹೆರ ಪಂಡರಿ' ಈ ಪದ್ಯ­ಗಳು ನನಗೆ ಒಂದು ರೀತಿಯ ಹುಚ್ಚನ್ನೇ ಹಿಡಿ­ಸಿ­ದ್ದವು ಎಂದರೆ ತಪ್ಪಾ­ಗ­ಲಾ­ರದು.
ಒಮ್ಮೆ ಗೋಕ­ರ್ಣಕ್ಕೆ ಶ್ಯಾಮಲಾ ಭಾವೆ ಅವರು ಬಂದಾಗ ಅವರ ಹಿಂದೆಯೇ ಹೊರ­ಟ­ವನು ನಾನು. ಅದು ಮನೆ­ಯ­ವ­ರಿಗೆ ಗೊತ್ತಾಗಿ ಹೋಗಲು ಬಿಡ­ಲಿಲ್ಲ. `ಒಬ್ಬನೇ ಮಗ ಸಂಗೀತ ಕಲಿ­ತರೆ ಕೈಗೆ ಸಿಗ­ಲಾರ' ಎಂಬ ಕಾರ­ಣ­ದಿಂ­ದಲೋ ಎನೋ?..
ನನ್ನ ವಿದ್ಯಾ­ಭ್ಯಾ­ಸವು ಪ್ರಥಮ ಪಿಯು­ಸಿಗೆ ಮುಕ್ತಾ­ಯ­ಗೊಂ­ಡಿತು. ಆಮೇಲೆ ಹೊಟ್ಟೆ­ಪಾಡು. ಎಲೆ­ಕ್ಟ್ರಿಕ್‌ ಕೆಲಸ ಕಲಿತೆ. ಕರೆಂಟ್‌ ವಾಯ­ರಿಂಗ್‌ ಮಾಡು­ವುದು ನನ್ನ ಉದ್ಯೋ­ಗ­ವಾ­ಯಿತು. ಆವಾಗ ಅಪ­ರೂ­ಪ­ವಾದ ಮೈಕ್‌ ಸೆಟ್‌ ಇಟ್ಟು ನಾಟಕ, ಸಂಗೀತ ಕಾರ್ಯ­ಕ್ರ­ಮ­ಗ­ಳಿಗೆ ನೀಡ­ತೊ­ಡ­ಗಿದೆ. ಜೀವನ ಪೂರ್ತಿ ಲೈಟ್‌ ಕಂಬ ಹತ್ತು­ವು­ದ­ರ­ಲ್ಲಿಯೇ ಕಳೆ­ಯು­ತ್ತದೆ ಎಂದು­ಕೊಂ­ಡಿದ್ದೆ. ಆದರೆ ಹಾಗಾ­ಗ­ಲಿಲ್ಲ. ಯಕ್ಷ­ಗಾ­ನದ ಭಾಗ­ವ­ತ­ನಾದೆ. ನಾನು ಭಾಗ­ವತ ಆಗಿ­ರು­ವುದು ಒಂದು ಆಕ­ಸ್ಮಿಕ.
ಯಕ್ಷ­ಗಾ­ನದ ಮೇರು ಭಾಗ­ವತ ಉಪ್ಪೂರು ನಾರಾ­ಯಣ ಭಾಗ­ವ­ತರು ಹಾಗೂ ಸಣ್ಣ ವಯ­ಸ್ಸಿ­ನಲ್ಲೇ ಯಾರೂ ಮರೆ­ಯದ ಹೆಸ­ರನ್ನು ಮಾಡಿ ನೆನ­ಪಾ­ಗಿಯೇ ಉಳಿದ ದಿ. ಕಾಳಿಂಗ ನಾವು­ಡರು ಗೋಕ­ರ್ಣಕ್ಕೆ ಬಂದಿ­ದ್ದರು. ನನ್ನ ತಂದೆಗೂ ಅವ­ರಿಗೂ ಒಳ್ಳೆಯ ಸ್ನೇಹ­ವಿತ್ತು. ಉಪ್ಪೂ­ರರ ಹತ್ತಿರ ನನ್ನನ್ನು ತೋರಿಸಿ ಇವ­ನನ್ನು ದಾರಿಗೆ ತರುವ ಕೆಲಸ ನಿಮ್ಮದು ಎಂದು ಒಪ್ಪಿ­ಸಿ­ಬಿ­ಟ್ಟರು. ನಾನು ದಾರಿ ತಪ್ಪಿ­ರ­ಲಿಲ್ಲ ಅದು ಬೇರೆ ಮಾತು. ಅವರು ಹೇಳಿದ್ದು ನನ್ನ ಮೇಲಿನ ಕಾಳ­ಜಿ­ಯಿಂದ ಎನ್ನು­ವುದು ಸ್ಪಷ್ಟ.
ಸಂಗೀ­ತ­ಗಾ­ರ­ನಾ­ಗ­ಬೇ­ಕೆಂ­ದಿದ್ದ ನಾನು ಯಕ್ಷ­ಗಾ­ನದ ಭಾಗ­ವ­ತ­ನಾ­ಗ­ಬೇ­ಕಾದ ಸ್ಥಿತಿ ಬಂತು. ಮೊದ­ಲ­ನೆ­ಯ­ದಾಗಿ ನನಗೆ ಯಕ್ಷ­ಗಾ­ನ­ವೆಂ­ದರೆ ಅಷ್ಟ­ಕಷ್ಟೇ. ಅಂದರೆ ಗದಾ­ಯುದ್ಧ ಪ್ರಸಂ­ಗ­ವೆಂ­ದರೆ ಗದೆ­ಯಲ್ಲಿ ಹೊಡೆ­ದು­ಕೊ­ಳ್ಳು­ವುದು ಎನ್ನುವ ಕಲ್ಪನೆ ನನ್ನದು. ಆದರೆ ಎಂದು ಉಪ್ಪೂ­ರರ ಗರ­ಡಿಗೆ ಸೇರಿ­ದೆನೋ ಅಂದಿ­ನಿಂದ ನನ್ನ ಗತಿ ಬದ­ಲಾ­ಯಿತು. ಕನಸು ಮಾತ್ರ ಹಾಗೆಯೇ ಉಳಿ­ಯಿತು.
ದಿ. ಕಾಳಿಂಗ ನಾವುಡ, ಚಿಟ್ಟಾಣಿ ರಾಮ­ಚಂದ್ರ ಹೆಗಡೆ, ದಿ. ದುರ್ಗಪ್ಪ ಗುಡಿ­ಗಾ­ರರು ನನಗೆ ಉತ್ತಮ ಅವ­ಕಾ­ಶ­ಗ­ಳನ್ನು ನೀಡುತ್ತ ನನ್ನ ಬೆಳ­ವ­ಣಿ­ಗೆಗೆ ಕಾರ­ಣ­ರಾ­ದರು. ವಿಭಿ­ನ್ನ­ತೆ­ಯನ್ನು ಬಯ­ಸುವ ಮನಸ್ಸು ನನ್ನದು. ಹಾಗಾಗಿ ನಾನು ಆಡಿ­ಸುವ ಪ್ರಸಂ­ಗ­ಗ­ಳಲ್ಲಿ ಹೊಸ ಹೊಸ ಪ್ರಯೋ­ಗ­ಕಾ­ಣು­ವುದು ಸಹಜ. ಅದು ಯಶ­ಸ್ಸನ್ನು ಕಂಡಿತು. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಇಟ್ಟು­ಕೊಂಡು ಯಕ್ಷ­ಗಾ­ನ­ದಲ್ಲೂ ಸಂಗೀ­ತದ ರುಚಿ­ಯನ್ನು ಕಾಣ­ತೊ­ಡ­ಗಿದೆ. ಹೃದ­ಯಕ್ಕೆ ಹತ್ತಿ­ರ­ವಿ­ರುವ ಪೌರಾ­ಣಿಕ ಪ್ರಸಂ­ಗ­ಗಳು ಅನಿ­ವಾ­ರ್ಯ­ವಾಗಿ ಕಡಿಮೆ ಆಗುತ್ತ ಬಂದವು. ಜನ ಬಯ­ಸುವ ಪ್ರಸಂ­ಗ­ಗ­ಳನ್ನು ನೀಡ­ಬೇ­ಕಾದ ಸ್ಥಿತಿ ನಿರ್ಮಾ­ಣ­ವಾ­ಯಿತು. ಸಾಮಾ­ಜಿಕ ಪ್ರಸಂ­ಗ­ಗಳು ಕಿಸೆಗೆ ಹತ್ತಿ­ರ­ವಾ­ಯಿತು. ನಾನು ಮಾಡಿದ ಪ್ರಯೋ­ಗ­ಗ­ಳನ್ನು ಜನ ಒಪ್ಪಿ­ಕೊಂ­ಡರು. ವಿಮ­ರ್ಶ­ಕರ ಪಾಲಿಗೆ ಸಹ್ಯ­ವಾ­ಗ­ಲಿಲ್ಲ ಎನ್ನ­ಬ­ಹುದು. ನಾನು ಯಕ್ಷ­ಗಾ­ನ­ದಲ್ಲಿ ಒಂದು ಹಂತಕ್ಕೆ ಬೆಳೆ­ದಿ­ದ್ದೇನೆ. ಆದರೆ ನನ್ನ ಕನಸು ನನ­ಸಾ­ಗದ ಕನ­ಸಾ­ಗಿಯೇ ಉಳಿ­ಯ­ತ್ತ­ದೆಯೇ ಎನ್ನುವ ಭಯವು ಪ್ರಾರಂ­ಭ­ವಾ­ಯಿತು.
ಜೀವ­ನ­ಕ್ಕೊ­ಸ್ಕರ ಕರೆಂಟ್‌ ಕೆಲಸ ಮಾಡಲು ಪ್ರಾರಂ­ಭಿ­ಸಿದೆ. ಆಕ­ಸ್ಮಿ­ಕ­ವಾ­ಗಿಯೇ ಯಕ್ಷ­ಗಾನ ರಂಗಕ್ಕೆ ಬಂದೆ. ಹೀಗೆ ಬಂದ ಕೆಲ­ಸ­ವನ್ನು ಅಚ್ಚು ಕಟ್ಟಾಗಿ ಮಾಡಿ­ರುವ ತೃಪ್ತಿ­ಯಿದೆ. ಸಂಗೀ­ತ­ಗಾ­ರ­ನಾ­ಗುವ ಕನ­ಸನ್ನು ಕನ­ಸಾಗಿ ಉಳಿ­ಸಿ­ಕೊ­ಳ್ಳ­ಬಾ­ರದು ಅದನ್ನು ಸಾಕಾರ ಮಾಡಿ­ಕೊ­ಳ್ಳ­ಬೇ­ಕೆಂಬ ಹಠ ನನ್ನಲ್ಲಿ ಇತ್ತು, ಈಗಲೂ ಇದೆ.
ಸಂಗೀ­ತ­ಗಾ­ರ­ನಾ­ಗು­ವು­ದೇನೋ ಸರಿ, ಕಲಿ­ಯು­ವುದು ಯಾರ ಹತ್ತಿರ ? ಎಂಬುದು ಸಮ­ಸ್ಯೆ­ಯಾ­ಯಿತು. ಕಳೆದ ವರ್ಷ ಶ್ಯಾಮಲಾ ಭಾವೆ ಅವರ ಶಿಷ್ಯ­ನಾಗಿ ಸಂಗೀತ ಕಲಿ­ಯಲು ಪ್ರಾರಂ­ಭಿ­ಸಿ­ದ್ದೇನೆ. ಈಗ ಮತ್ತೊಮ್ಮೆ ನನ್ನ ಕನ­ಸಿಗೆ ರೆಕ್ಕೆ­ಗಳು ಬಂದಿವೆ. ಜನ ಮೆಚ್ಚುವ ಹಿಂದೂ­ಸ್ತಾನಿ ಸಂಗೀ­ತ­ಗಾ­ರ­ನಾ­ಗು­ತ್ತೇನೋ ಬಿಡು­ತ್ತೇನೋ ಗೊತ್ತಿಲ್ಲ. ಕನಸು ಪೂರ್ಣ ನನ­ಸಾ­ಗ­ದಿ­ದ್ದರೂ ಆಸೆ ಈಡೇ­ರ­ಬ­ಹು­ದೆನೋ ಎಂದು ಅನ್ನಿ­ಸು­ತ್ತದೆ..


ನಿರೂ­ಪಣೆ: ನಾಗ­ರಾಜ ಮತ್ತಿ­ಗಾರ

Sunday, May 3, 2009

ಯಕ್ಷಗಾನದ ಕೆಲವು ಹಾಸ್ಯ ಘಟನೆಗಳು


ಯಕ್ಷಗಾನ ಹಲವಾರು ವಿಷಯಕ್ಕಾಗಿ ಹಿಡಿಸುತ್ತದೆ. ಇಲ್ಲಿ ಬರುವ ಮಾತುಗಾರಿಗೆ ಬಹಳ ಸೃಜನಶಿಲವಾಗಿರುತ್ತದೆ, ಅಷ್ಟೇ ಹಾಸ್ಯ ಪ್ರಜ್ಞೆಯಿಂದ ಕೂಡಿರುತ್ತದೆ. ಇನ್ನೂ ಹಳ್ಳಿಯಲ್ಲಿ ನಡೆಯುವ ಯಕ್ಷಗಾನದಲ್ಲಿ ನಾಟಿ ಭಾಷೆಗಳು ಮಿಶ್ರಣವಾಗಿ ಗಮ್ಮತ್ತಾಗಿರುತ್ತದೆ. ಇಂತಹ ಗಮ್ಮತ್ತಾಗಿರುವ ಮಾತುಗಾರಿಕೆಯ ಕೆಲವು ತುಣುಕುಗಳು
ಬಂಗಾರ ನಾಯ್ಕರ ಕೌರ­ವನೂ ಸಿಐಡಿ ನಾಯಿಯೂ
ನಮ್ಮೂರ ಹತ್ತಿರ ಹಳಿ­ಯಾಳ ಎನ್ನುವ ಊರಿದೆ. ಆ ಊರಿ­ನಲ್ಲಿ ಬಂಗಾರ್ಯ ನಾಯ್ಕ ಎನ್ನುವ ಹಿರಿಯ ವ್ಯಕ್ತಿ­ಯೊ­ಬ್ಬ­ರಿ­ದ್ದಾರೆ. ಅವರು ಆ ಊರಿನ ಮಾರಿ ದೇವ­ಸ್ಥಾ­ನದ ಪೂಜಾ­ರಿಯು ಹೌದು. ಇವ­ರಿಗೆ ಯಕ್ಷ­ಗಾ­ನ­ದಲ್ಲಿ ಪಾತ್ರ ಮಾಡುವ ಚಟ ಜೋರು. ತಮ್ಮ ಮನೆಯ ಸಮಾ­ರಾಧಾ­ನೆ­ಯಲ್ಲಿ ಒಂದು ಯಕ್ಷ­ಗಾನ ಏರ್ಪ­ಡಿಸಿ ಅಲ್ಲಿ ತಾವೊಂದು ಮುಖ್ಯ ಪಾತ್ರ­ವನ್ನು ಮಾಡು­ತ್ತಿ­ದ್ದರು. ಸಾಮಾ­ನ್ಯ­ವಾಗಿ ಪ್ರತಿ­ವ­ರ್ಷವೂ ಗದಾ­ಯುದ್ಧ ಪ್ರಸಂ­ಗವೇ ಇರು­ತ್ತಿತ್ತು. ಕಾರ­ಣ­ವೆಂ­ದರೆ ಇವ­ರಿಗೆ ಕೌರ­ವನ ಪಾತ್ರ ಮಾಡು­ವು­ದ­ರಲ್ಲಿ ಬಹಳ ಆಸಕ್ತಿ. ಪ್ರತಿ ಬಾರಿಯೂ ಇದು ನನ್ನ 101ನೇ ಕೌರವ ಎನ್ನು­ತ್ತಿ­ದ್ದರು.
ಆಟ ಪ್ರಾರಂ­ಭ­ದಿಂ­ದಲೇ ಅಪ­ಭ್ರಂ­ಶ­ತೆಯು ಪ್ರಾರಂಭ. ‘ಕು­ರು­ರಾಯ ಅದ­ನೆಲ್ಲ ಕಂಡು ಸಂತಾ­ಪದಿ ತನ್ನೇಯ ಭಾಗ್ಯ­ವೆ­ನುತ’ ಎನ್ನುವ ಪದ್ಯ­ದೊಂ­ದಿಗೆ ಕೌರ­ವನ ಪ್ರವೇಶ ಎಲ್ಲಾ ಯಕ್ಷ­ಗಾ­ನ­ದಲ್ಲೂ ಆಗು­ತ್ತದೆ. ಆದರೆ ಬಂಗಾರ್ಯ ಅವರ ಕೌರ­ವನ ಪಾತ್ರ ಪ್ರವೇ­ಶ­ವಾ­ಗು­ವುದೇ ‘ಕು­ರು­ರಾಯ ಅದ­ನೆಲ್ಲ ಕಂಡು ಸಂತೋ­ಷದಿ’ ಎಂದು. ಅದಕ್ಕೆ ಕಾರ­ಣವು ಉಂಟುತೊಂ­ತ್ತೊಂ­ಬತ್ತು ಜನ ತಮ್ಮಂ­ದಿ­ರನ್ನು ಪಾಮ­ಡ­ವರು ಕೊಂದರು ತನ್ನನ್ನು ಮಾತ್ರ ಕೊಲ್ಲ­ಲಿಕ್ಕೆ ಆಗ­ಲಿ­ಲ್ಲ­ವಲ್ಲ ಎನ್ನು ಸಂತೋಷ. ಪ್ರೇಕ್ಷ­ಕರು ಚಪ್ಪಾಳೆ ಹೊಡೆ­ದಂತೆ ಕೌರ­ವನ ಕುಣಿ­ತವು ಜೋರಾಗಿ ಸಾಗು­ತ್ತಿತ್ತು. ಕೃಷ್ಣನ ಕಂಡಾಗ ಕೌರವ ಹೇಳುವ ಅರ್ಥವು ಅಷ್ಟೇ ಸೊಗಸು ಱ ಏನಾ ಕಪಟಿ ನೀನು ವಿದು­ರನ ಮನೆ ಕಡ­ವಾ­ರ­ದ­ಲೆಲ್ಲ ಹಾಲು ಹರ್ಸಿ­ಯಂತೆ ಹೌದನಾ. ಎಂದು ತನ್ನ ಲೋಕಲ್‌ ಲಾಂಗ್ವೇ­ಜ್‌­ನ­ಲ್ಲಿಯೇ ಅರ್ತ­ವನ್ನು ಹೇಳು­ವುದು ವಿಶೇಷ. ನೀರಿ­ನಲ್ಲಿ ಅಡ­ಗಿ­ರುವ ಕೌರ­ವ­ನನ್ನು ‘ಛೀಂ­ದ್ರ­ಪ­ಕುಲ ಕುನ್ನಿ’ ಎಂದು ಬೈದು ಕರೆ­ದಾಗ ನೀರಿಂದ ಮೇಲೆದ್ದು ಬಂದ ಕೌರವ ತಡ­ಮಾ­ಡದೇ ‘ನಾನು ಛೀಂದ್ರ­ಪ­ಕುಲ ಕುನ್ನಿ­ಯಾ­ದರೆ ನೀನೇನು ಸಿಐಡಿ ನಾಯನಾ’ಎಂದು ಇಂಗ್ಲಿಷ್‌ ಬಳಕೆ ಮಾಡಿ ಯಕ್ಷ­ಗಾ­ನದ ಕೊಲೆ­ಯಾ­ಗು­ತ್ತದೆ. ಆದರೆ ಇದು ಹಳ್ಳಿ ಆಟ­ವೆಂಬ ವಿನಾ­ಯತಿ ಇದ­ಕ್ಕಿ­ರು­ತ್ತದೆ.
ನಾರಾಯಣ ನಾಯ್ಕನ ಶನಿ
ಮಾದ್ಲಮನೆ ಎನ್ನುವ ಹಳ್ಳಿ ಅಲ್ಲೊಬ್ಬ ನಾರಾಯಣ ನಾಯ್ಕ ಎನ್ನುವವರಿದ್ದಾರೆ. ಅವರೊಬ್ಬ ಸ್ವಘೋಷಿತ ಸಾಮೀಜಿ. ಶನಿ ದೇವರು ಆರಾಧ್ಯ ದೈವ. ಅದಕ್ಕಾಗಿ ಪ್ರತಿ ವರ್ಷ ಶನಿ ಜಾತ್ರೆ ಮತ್ತು ಯಕ್ಷಗಾನ ವಿಶೇಷವಾಗಿ ಶನಿ ಮಹಾತ್ಮೆ ಯಕ್ಷಗಾನವನ್ನೇ ಆಡುತ್ತಾರೆ. ಶನಿಯ ಪಾತ್ರದಲ್ಲಿ ಸ್ವಾಮಿಯದ್ದೇ. ಇಲ್ಲಿ ಒಂದು ಗಮ್ಮತ್ತು. ಶನಿಗೆ ಬಣ್ಣ ಹಚ್ಚಿಯಾದ ತಕ್ಷಣದಲ್ಲೆ ರಂಗ ಪ್ರವೆಶವಾಗಬೇಕು. ರಂಗ ಬಂದ ಕೂಡಲೇ ಶನಿ ನಾರಾಯಣ ನಾಯ್ಕನ ಮೈಮೇಲೆ ಬರುತ್ತದೆ. ವಿಕ್ರಮನ ಪಾತ್ರಧಾರಿ ಮಾತೇ ಆಡಬಾರದು ಒನ್ನೊಮ್ಮೆ ಮಾತನಾಡಿದರೆ ಶನಿ ರೂಪದಲ್ಲಿರುವ ನಾರಾಯಣ ನಾಯ್ಕ ಕಡಿಯಲಿಕ್ಕೆ ಹೋರಡುತ್ತಾನೆ. ಒಮ್ಮ ವಿಕ್ರಮನ ಪಾತ್ರಧಾರಿ ಗದ್ದೆ ಬಯಲು ಬಿದ್ದು ಓಡಿಹೋಗಿ ಆಟವೇ ನಿಂತಿದೆ.
ಪಂಚವಲ್ಲಭೆ ಅಲ್ಲವೇ ನಾನು
ಇದೊಂದು ಹಳ್ಳಿಯಲ್ಲೇ ನಡೆದ ಘಟನೆ

ಕೀಚಕವಧೆ ಪ್ರಸಂಗ, ಈ ಪ್ರಸಂಗದ ಕೊನೆಯ ಸನ್ನಿವೇಶದಲ್ಲಿ ಸೈರೇಂದ್ರಿಯ(ದ್ರೌಪದಿ) ವೇಷದಲ್ಲಿ ಕೀಚಕ ಇದ್ದಲ್ಲಿಗೆ ಭೀಮ ಹೋಗುತ್ತಾನೆ. ಕೀಚಕ ಸೈರೇಂದ್ರಿಯೇ ಬಂದಳೆಂದು ತಿಳಿದು ಗಟ್ಟಿಯಾಗಿ ಅಪ್ಪಿ ಹಾಕಿಕೊಳ್ಳುತ್ತಾನೆ. ಕೀಚಕನಿಗೆ ಏನೋ ಅನುಮಾನ ಬಂದಂತಾಗಿ ಸೈರೇಂದ್ರಿ ನಿನ್ನ ಕುಚದ್ವಯಗಳೇ ಸಿಗುತ್ತಲ್ಲವಲ್ಲ? ಎಂದು ಅನುಮಾನ ವ್ಯಕ್ತ ಪಡಿಸುತ್ತಾನೆ. ಸೈರೇಂದ್ರಿಯ ವೇಶದಲ್ಲಿದ್ದ ಭೀಮ ಪಾತ್ರಧಾರಿ ತಕ್ಷಣ ಉತ್ತರಿಸಿದ ಕೀಚಕ ನನಗೆ ಐದು ಮಂದಿ ಗಂಡಂದಿರು ಎಂದು ನಿನಗೆ ತಿಳಿದಿಲ್ಲವೇ. ಮತ್ತೆ ಹೇಗೆ ಅದು ಸಿಗಲು ಸಾಧ್ಯ ಎಂದು
ಐದು ಗ್ರಾಮ ತಗೊಂಡು

ಕಂಚಿಕೈ ಊರಿನಲ್ಲಿ ಮಳೆಗಾಲ ಒಂದು ತಾಳ ಮದ್ದಲೆಯನ್ನು ಏರ್ಪಡಿಸುವುದು ಒಂದು ಸಂಪ್ರದಾಯವಾಗಿಯೇ ಬೆಳೆದು ಬಂದಿತ್ತು, ಕೈಂಚಿಕೈ ಹೆಗೆಡೆರು ಮುಖ್ಯ ಪಾತ್ರ ಹಾಕುವುದು ರೂಢಿಯಲ್ಲಿತ್ತು. ಅಂದು ಶ್ರೀಕೃಷ್ಣ ಸಂಧಾನ ಪ್ರಸಂಗ. ಕೈಂಚಿಕೈ ಹೆಗಡೆರ ಕೌರವ. ಕೃಷ್ಣ ಬಂದು ಕೇಳುತ್ತಾನೆ, ಕೌರವ ಪಾಂಡವರಿಗೆ ಐದು ರಾಜ್ಯದ ಬದಲು ಐದು ಗ್ರಾಮವನ್ನಾದರೂ ಕೊಡು ಎಂದು, ಊರಿನ ಹೆಂಗಸರೆಲ್ಲ ತಾಳ ಮದ್ದಲೆ ವಿಕ್ಷೀಸಲು ಮುಂದೆ ಕುಳಿತಿದ್ದರು. ಹೆಗೆಡೆರು ಒಂದು ಸೂಜಿ ಮನೆ ಜಾಗವನ್ನು ನೀಡುವುದಿಲ್ಲ ಹೇಳುವ ಬದಲು ಕೃಷ್ನ ಐದು ಗ್ರಾಮ ತಾನೆ ತೆಗೆದು ಕೊಂಡು ಹೋಗು ಎನ್ನುವುದಾಗಿ ಹೇಳಿ ಬಿಟ್ಟರು. ಯಾಕೆ ಹಿಗಂದ್ರಿ ಹೆಗಡೆರೆ ಎಂದು ಕೇಳಿದರೆ ತಾನು ಇಷ್ಟು ದೊಡ್ಡ ಮನುಷ್ಯ ಆಗಿ ಕೃಷ್ಣವ ಬರಿಗೈಯಲ್ಲಿ ಕಳಿಸುವ ಮನಸಾಗಲಿಲ್ಲ ಅಂದರಂತೆ.

Followers

FEEDJIT Live Traffic Feed